ಒಳ ಮೀಸಲಾತಿ ವರದಿ ಬಲಗೈ ಸಮುದಾಯದ ಮರಣ ಶಾಸನ : ಜ್ಞಾನಪ್ರಕಾಶ್ ಸ್ವಾಮೀಜಿ
ವರದಿ ವಿರೋಧಿಸಿ ಆ. 14ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ
ಮೈಸೂರು: ನ್ಯಾ.ನಾಗಮೋಹನ್ ದಾಸ್ ಆಯೋಗದ ಒಳ ಮೀಸಲಾತಿ ವರದಿ ಬಲಗೈ ಸಮುದಾಯದ ಮರಣ ಶಾಸನವಾಗಿದೆ. ಇದರ ವಿರುದ್ಧ ಆ.14 ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನ್ಯಾ.ನಾಗಮೋಹನ್ ದಾಸ್ ಆಗಸ್ಟ್ 4 ರಂದು ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ಒಳ ಮೀಸಲಾತಿ ವರದಿಯು ಅವೈಜ್ಞಾನಿಕ, ಅಪೂರ್ಣ ಮತ್ತು ದುರುದ್ದೇಶ ಪೂರಿತವಾಗಿದೆ. ಸರಕಾರದ ನಿಬಂಧನೆಗಳ ಉಲ್ಲಂಘನೆ ಹಾಗೂ ಅಧಿಕಾರದ ವ್ಯಾಪ್ತಿ ಮೀರಿ ಮಾಡಿರುವ ಶಿಫಾರಸ್ಸುಗಳಾಗಿರುವುದರಿಂದ ಈ ವರದಿಯನ್ನು ಸರಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
1901 ರಿಂದ 1911, 1950,2011 ಮತ್ತು 2017 ರವರೆಗೂ 40 ಲಕ್ಷ ಇದ್ದ ಪರಿಶಿಷ್ಟ ಜಾತಿ ಬಲಗೈ ಸಮುದಾಯವನ್ನು ರಾಜಕೀಯ, ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕುಗಳಿಂದ ವಂಚಿತರನ್ನಾಗಿ ಮಾಡುವ ಷಡ್ಯಂತರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೋ ಒಂದು ಸಮುದಾಯ ವನ್ನು ರಕ್ಷಿಸಲು ಹೋಗಿ ಮತ್ತೊಂದು ಸಮುದಾಯವನ್ನು ವಂಚಿಸಲಾಗಿದೆ. ನಾವು ಯಾವುದೇ ಸಮುದಾಯದ ವಿರೋಧಿಗಳಲ್ಲ. ಎಡಗೈ ಸಮುದಾಯ ದವರು ನಮ್ಮ ಸಹೋದರರೇ, ಅವರಿಗೆ ಶೇ.6ರಷ್ಟು ಕೊಟ್ಟಿರುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ನಮ್ಮ ಬಲಗೈ ಸಮುದಾಯದ ಅಂಕಿ ಅಂಶಗಳ ಪ್ರಕಾರ ಒಳ ಮೀಸಲಾತಿ ವರದಿ ನೀಡದಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.
ಆಗಸ್ಟ್ 14 ರಂದು ಮೈಸೂರಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು,
ಬಲಗೈ ಸಮುದಾಯದವರು ಭಾಗವಹಿ ಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನಗ.ಭಾಸ್ಕರ್, ಸಾಹಿತಿ ಹಾಗೂ ಲೇಖಕ ಸಿದ್ಧಸ್ವಾಮಿ, ಜೋಗಿ ಮಹೇಶ್, ಸೋಮಯ್ಯ ಮಲೆಯೂರು, ಆಟೋ ಪುಟ್ಟರಾಜು ಉಪಸ್ಥಿತರಿದ್ದರು.
ಒಂದು ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳುವುದು ರಾಷ್ಟ್ರದ್ರೋಹ ಮತ್ತು ಸಂವಿಧಾನಕ್ಕೆ ಮಾಡಿದ ಅಪಚಾರ ಹಾಗೂ ಸಾಮಾಜಿಕ ನ್ಯಾಯಕ್ಕೆ ಮಾಡಿದ ಅಪಚಾರ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಇದ್ದ ಸಂವಿಧಾನದ ಆಶಯವನ್ನು ನ್ಯಾ.ನಾಗಮೋಹನ್ ದಾಸ್ ನುಚ್ಚು ನೂರು ಮಾಡಿದ್ದಾರೆ.
- ಜ್ಞಾನಪ್ರಕಾಶ್ ಸ್ವಾಮೀಜಿ, ಉರಿಲಿಂಗಿ ಪೆದ್ದಿಮಠ