ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ ಮಾತ್ರ ರಾಜ್ಯದಲ್ಲಿ ಕ್ರಾಂತಿ: ವಾಟಾಳ್ ನಾಗರಾಜ್
"ಸಿದ್ದರಾಮಯ್ಯ ಉತ್ತಮ ಆಡಳಿತಗಾರ"
ವಾಟಾಳ್ ನಾಗರಾಜ್
ಮೈಸೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ ಮಾತ್ರ ಕ್ರಾಂತಿ ಆಗಲಿದೆ ಹೊರತು ಈಗ ಯಾವುದೇ ಕ್ರಾಂತಿ ನಡೆಯಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ರಾಜ್ಯದಲ್ಲಿ ಕ್ರಾಂತಿ ನಡೆಯಲ್ಲ, ಕ್ರಾಂತಿ ಎಂದು ಹೇಳಿದವರಿಗೆ ಅದರ ಅರ್ಥ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಅವರನ್ನು ಬದಲಾಯಿಸಲು ಹೊರಟರೆ ದೊಡ್ಡ ಕ್ರಾಂತಿಯೇ ನಡೆಯಲಿದೆ ಎಂದರು.
ಸಿದ್ದರಾಮಯ್ಯ ಬುದ್ದಿವಂತ ರಾಜಕಾರಣಿ. ಅವರಿಗೆ ಯಾವಾಗ ಏನು ಮಾಡಬೇಕು ಎಂಬುದು ಗೊತ್ತಿದೆ. ಸಿದ್ದರಾಮಯ್ಯ ಇಲ್ಲ ಅಂದರೆ ಕಾಂಗ್ರೆಸ್ ಗೆ ದೊಡ್ಡ ನಷ್ಟ. ಸಿದ್ದರಾಮಯ್ಯ ಅವರಂತ ನಾಯಕರು ಬಿಜೆಪಿ, ಜೆಡಿಎಸ್ ನಲ್ಲಿ ಯಾರೂ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಉತ್ತಮ ಆಡಳಿತಗಾರ, ಅವರ ನೇತೃತ್ವದಲ್ಲೇ 2028 ರ ಚುನಾವಣೆ ನಡೆಯಲಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನವನ್ನು ಕರಾಳ ದಿನವಾಗಿ ಆಚರಣೆ ಮಾಡುವುದಾಗಿ ಹೇಳಿರುವ ಎಂ.ಇ.ಎಸ್ ಅನ್ನು ನಿಷೇಧ ಮಾಡಬೇಕು. ಬೆಳಗಾವಿಯಿಂದಲೇ ಎಂ.ಇ.ಎಸ್ ಗಡಿಪಾರು ಮಾಡಬೇಕು.
-ವಾಟಾಳ್ ನಾಗರಾಜ್, ಕನ್ನಡ ಹೋರಟಗಾರ