ಕೇಂದ್ರ ಸರ್ಕಾರದ ಕಾರ್ಮಿಕ,ರೈತ ವಿರೋಧಿ ನೀತಿ ಖಂಡಿಸಿ ಮೈಸೂರಿನಲ್ಲಿ ಕಾರ್ಮಿಕರ ಪ್ರತಿಭಟನೆ
ಮೈಸೂರು: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನಲೆಯಲ್ಲಿ ಮೈಸೂರಿನಲ್ಲೂ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಯಿತು.
ನಗರದ ಪುರಭವನದ ಆವರಣದಲ್ಲಿ ಜಮಾಯಿಸಿದ ವಿವಿಧ ಸಂಘಟನೆಗಳ ಮುಖಂಡರುಗಳು ಕಾರ್ಯಕರ್ತರುಗಳು ಗಾಂಧಿ ಚೌಕ, ಕೆ.ಟಿ.ಸ್ಟ್ರೀಟ್, ಇರ್ವಿನ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆ ಮೂಲಕ ಮೆರವಣಿಗೆ ನಡೆಸಿ ಮಕ್ಕಾಜಿ ಚೌಕ ತಲುಪಿದರು. ಈ ವೇಳೆ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಳಿಕ ಪುರಭವನದ ಆವರಣದಲ್ಲಿ ಬಹಿರಂಗ ಸಭೆ ನಡೆಸಿ ಒಕ್ಕೊರಲಿನಿಂದ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು.
ಇದೇ ವೇಳೆ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಸಂಚಾಲಕ ದೇವದಾಸ್ ಮಾತನಾಡಿ, "ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ , ರೈತ ವಿರೋಧಿ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಕೂಡಲೇ ಕಾರ್ಮಿಕರು ಮತ್ತು ರೈತ ವಿರೋಧಿ ನೀತಿಗಳನ್ನು ರದ್ದುಪಡಿಸಬೇಕು" ಎಂದು ಆಗ್ರಹಿಸಿದರು.
ಪ್ರಮುಖ ಬೇಡಿಕೆಗಳು:
8 ಗಂಟೆ ಕೆಲಸದ ಅವಧಿ, ಖಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು, ಸಂಘ ಕಟ್ಟುವ ಹಕ್ಕು, ಇನ್ನಿತರ ಹಕ್ಕುಗಳನ್ನು ಇಲ್ಲದಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳದ ಪರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದುಪಡಿಸಬೇಕು.
ಇವತ್ತಿನ ಬೆಲೆಗಳಿಗೆ ಅನುಗುಣವಾಗಿ ಎಲ್ಲಾ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು ಮತ್ತು ಸ್ಟೀಂ ನೌಕರರಿಗೂ ರಾಷ್ಟ್ರವ್ಯಾಪಿ 26 ಸಾವಿರ ಹಾಗೂ ರಾಜ್ಯವ್ಯಾಪಿ 36 ಸಾವಿರ ಕನಿಷ್ಟ ವೇತನ ನಿಗದಿಪಡಿಸಬೇಕು. ಗುತ್ತಿಗೆ, ಹೊರ ಗುತ್ತಿಗೆ, ನಿಗದಿತ ಅವಧಿಯ ಉದ್ಯೋಗ, ಅಪ್ರೆಂಟಿಸ್, ಟ್ರೈನಿ, ನ್ಯಾಪ್ಸ್ ಮುಂತಾದ ಹೆಸರಿನಲ್ಲಿ ಕಾರ್ಮಿಕರ ನೇಮಕ ನಿಲ್ಲಿಸಬೇಕು. ಗುತ್ತಿಗೆ, ಮುಂತಾದ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಕ್ಷಣ ಜಾರಿ ಮಾಡಬೇಕು. ಕಟ್ಟಡ ಕಾರ್ಮಿಕರು, ಆಟೋ-ಟ್ಯಾಕ್ಸಿ ಚಾಲಕರು, ಮನೆಕೆಲಸಗಾರರು, ಗಿಗ್ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಟೈಲರ್‌ಗಳು, ಫೋಟೋಗ್ರಾಫರ್ಸ್ ಮೆಕಾನಿಕ್ಸ್, ಬೀಡಿ-ಅಗರಬತ್ತಿ, ಹೆಂಚು ಕಾರ್ಮಿಕರು, ಮೀನುಗಾರರು, ಇನ್ನಿತರ ಎಲ್ಲಾ ಅಸಂಘಟಿತ ಕಾರ್ಮಿಕರು ಮತ್ತು ಕೃಷಿ-ತೋಟ ಕಾರ್ಮಿಕರು ಸೇರಿದಂತೆ ಎಲ್ಲಾ ವಿಭಾಗದ ಕಾರ್ಮಿಕರಿಗೆ ಕನಿಷ್ಟ ಮಾಸಿಕ ರೂ.9,000/- ಪಿಂಚಣಿ ಹಾಗೂ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಬೇಕು. ಎನ್‌ಪಿಎಸ್ ಮತ್ತು ಯುಪಿಎಸ್ ರದ್ದುಪಡಿಸಿ, ಹಳೆಯ ಪೆನ್ನನ್ ಸ್ಟೀಂ ನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಇಎಸ್‌ಐ, ಪಿ.ಎಫ್. ಬೋನಸ್ ಪಾವತಿಗಿರುವ ಎಲ್ಲಾ ವೇತನ ಮಿತಿಯನ್ನು ತೆಗೆಯಬೇಕು. ಗ್ರಾಚ್ಯುಟಿ ಪರಿಹಾರ 90 ದಿನಕ್ಕೆ ಹೆಚ್ಚಿಸಬೇಕು. ಅರ್ಜಿ ಸಲ್ಲಿಸಿದ 45 ದಿನಗಳೊಳಗೆ ಕಾರ್ಮಿಕ ಸಂಘಗಳ ಕಡ್ಡಾಯ ನೊಂದಣಿ ಹಾಗು ಮಾನ್ಯತೆ ನೀಡಬೇಕೆಂಬ ಐಎಲ್ಓ ಸಮಾವೇಶದ ಸಿ87 ಮತ್ತು ಸಿ98 ನಿರ್ಣಯಗಳನ್ನು ಕೇಂದ್ರ ಸರ್ಕಾರ ಅನುಮೋದಿಸಬೇಕು. ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಆಹಾರ, ಔಷಧಿಗಳು, ಕೃಷಿ ಸಾಮಾಗ್ರಿ ಮುಂತಾದ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ತೆಗೆಯಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮೇಲಿನ ಕೇಂದ್ರೀಯ ಅಬಕಾರಿ ಸುಂಕ ಇಳಿಸಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕರಣಗೊಳಿಸಿ ಆಹಾರ ಭದ್ರತೆಯನ್ನು ಖಾತ್ರಿಪಡಿಸಬೇಕು. ಸಾರ್ವಜನಿಕ ಉದ್ದಿಮೆ, ನಿಗಮ ಮತ್ತು ಇಲಾಖೆಗಳನ್ನು ಖಾಸಗೀಕರಿಸುವ 'ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ ಯೋಜನೆ'ಯನ್ನು ರದ್ದುಪಡಿಸಬೇಕು ಎಂಬಿತ್ಯಾದಿ ಸೇರಿದಂತೆ ಇನ್ನಿತರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ದೇವದಾಸ್ ಎನ್.ಕೆ. ಜೆಸಿಟಿಯು ಪ್ರಧಾನಕಾರ್ಯದರ್ಶಿ ಬಾಲಾಜಿರಾವ್ , ಸಿಐಟಿಯು ಪ್ರಧಾನಕಾರ್ಯದರ್ಶಿ ಚಂದ್ರಶೇಖರ್ ಮೇಟಿ , ಪ್ರಾಂತ ರೈತ ಸಂಘದ ಅಧ್ಯಕ್ಷ ಜಗದೀಶ್ ಸೂೂರ್ಯ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪಿ.ಮರಂಕಯ್ಯ, ಅಂಗನವಾಡಿ ಮಹದೇವಮ್ಮ, ಚೌಡಹಳ್ಳಿ ಜವರಯ್ಯ ಸೇರಿದಂತೆ ಹಲವರು ಮುಷ್ಕರದಲ್ಲಿ ಭಾಗವಹಿಸಿದ್ದರು.