ದಿಲ್ಲಿ ಮಳೆ ಅವಾಂತರ | ಮೃತರ ಸಂಖ್ಯೆ 11ಕ್ಕೇರಿಕೆ
PC : PTI
ಹೊಸದಿಲ್ಲಿ : ಶನಿವಾರ ಉತ್ತರ ದಿಲ್ಲಿಯ ಸಮಯಪುರ ಬದ್ಲಿ ಪ್ರದೇಶದಲ್ಲಿ ನೀರು ತುಂಬಿದ್ದ ಅಂಡರ್‌ಪಾಸ್‌ನಲ್ಲಿ ಮುಳುಗಿ ಒಂಭತ್ತು ವರ್ಷ ಪ್ರಾಯದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇದರೊಂದಿಗೆ ಶುಕ್ರವಾರ ರಾಷ್ಟ್ರರಾಜಧಾನಿಯನ್ನು ತಲ್ಲಣಗೊಳಿಸಿದ್ದ ಭಾರೀ ಮಳೆಯಿಂದಾಗಿ ಪ್ರತ್ಯೇಕ ದುರ್ಘಟನೆಗಳಲ್ಲಿ ಸಂಭವಿಸಿರುವ ಸಾವುಗಳ ಸಂಖ್ಯೆ 11ಕ್ಕೇರಿದೆ.
ದಕ್ಷಿಣ ದಿಲ್ಲಿಯ ವಸಂತ ವಿಹಾರ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ 5:30ರ ಸುಮಾರಿಗೆ ನಿರ್ಮಾಣ ಹಂತದಲ್ಲಿದ್ದ ಬೃಹತ್ ಗೋಡೆಯೊಂದು ಕುಸಿದು ಬಿದ್ದು, ಕೆಸರಿನಲ್ಲಿ ಹೂತುಹೋಗಿದ್ದ ಮೂವರು ಕಾರ್ಮಿಕರ ಶವಗಳನ್ನು 24 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಶನಿವಾರ ಬೆಳಿಗ್ಗೆ ಹೊರತೆಗೆಯಲಾಗಿದೆ.
ದಕ್ಷಿಣ ದಿಲ್ಲಿಯ ಓಖ್ಲಾ ಪ್ರದೇಶದಲ್ಲಿ ನೀರು ತುಂಬಿದ್ದ ಅಂಡರ್‌ಪಾಸ್‌ನಲ್ಲಿ ತನ್ನ ಸ್ಕೂಟರ್ ಸಹಿತ ಬಿದ್ದು 60ರ ಹರೆಯದ ವ್ಯಕ್ತಿಯೋರ್ವರು ಮೃತಪಟ್ಟಿದ್ದರೆ, ಅದಕ್ಕೂ ಮುನ್ನ ದಿಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಕ್ಯಾಬ್ ಚಾಲಕನನೋರ್ವ ಮೃತಪಟ್ಟಿದ್ದರು.
ಶುಕ್ರವಾರ ಸಂಜೆ ಈಶಾನ್ಯ ದಿಲ್ಲಿಯ ನ್ಯೂ ಉಸ್ಮಾನಪುರದಲ್ಲಿ ಮಳೆನೀರು ತುಂಬಿದ್ದ ಹೊಂಡದಲ್ಲಿ ಈಜಲು ಇಳಿದಿದ್ದ ಎಂಟು ಮತ್ತು ಹತ್ತು ವರ್ಷ ಪ್ರಾಯದ ಇಬ್ಬರು ಮಕ್ಕಳು ಮೃತಪಟ್ಟಿದ್ದರೆ, ರೋಹಿಣಿ ಪ್ರದೇಶದಲ್ಲಿ ಜಲಾವೃತಗೊಂಡಿದ್ದ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ 39ರ ಹರೆಯದ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ.
ವಾಯುವ್ಯ ದಿಲ್ಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ ನೀರು ತುಂಬಿದ್ದ ಅಂಡರ್‌ಪಾಸ್‌ನಲ್ಲಿ ಮುಳುಗಿ ಆಜಾದ್‌ಪುರ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಸಾವನ್ನಪ್ಪಿದ್ದಾರೆ.