ಕಾವೇರಿ ವಿವಾದ: ತಮಿಳುನಾಡು ಅರ್ಜಿ ಕುರಿತು ಮಧ್ಯಂತರ ಆದೇಶ ಪ್ರಕಟಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಕಾವೇರಿ ನದಿಯಿಂದ 24,000 ಕ್ಯೂಸೆಕ್ಸ್ ನೀರು ಬಿಡುಗಡೆಗೊಳಿಸುವಂತೆ ಕರ್ನಾಟಕಕ್ಕೆ ಸೂಚಿಸಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ಕುರಿತಂತೆ ಮಧ್ಯಂತರ ಆದೇಶ ಪ್ರಕಟಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ ಹಾಗೂ ಈ ವಿಚಾರ ಕುರಿತು ತನಗೆ ಯಾವುದೇ ಪರಿಣತಿ ಇಲ್ಲ ಎಂದು ಹೇಳಿದೆ.
ಕರ್ನಾಟಕ ಸರ್ಕಾರ ಬಿಡುಗಡೆಗೊಳಿಸಿರುವ ನೀರಿನ ಪ್ರಮಾಣದ ಕುರಿತಂತೆ ಸೆಪ್ಟೆಂಬರ್ 8ಕ್ಕಿಂತ ಮೊದಲು ವರದಿಯನ್ನು ಸಲ್ಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಜಸ್ಟಿಸ್ ಬಿ ಆರ್ ಗವಾಯಿ ಅವರ ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಸೂಚಿಸಿದೆ.
ಪ್ರಾಧಿಕಾರದ ಸಭೆ ಸೋಮವಾರಕ್ಕೆ ನಿಗದಿಯಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಟಿ ಹೇಳಿದ ನಂತರ ಕೋರ್ಟ್ ವರದಿ ಹೇಇದೆ.
ನೀರು ಬಿಡುಗಡೆ ಕುರಿತಾದ ಸೂಚನೆಗಳನ್ನು ಪಾಲಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನೂ ವರದಿಯಲ್ಲಿ ತಿಳಿಸುವಂತೆ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಪಿ ಕೆ ಮಿಶ್ರಾ ಅವರ ಪೀಠ ಹೇಳಿದೆ.
ನೀರು ಬಿಡುಗಡೆಗೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಅದಾಗಲೇ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿರುವ ಕರ್ನಾಟಕ ಸರ್ಕಾರ, “ಪ್ರಸ್ತುತ ಜಲ ವರ್ಷವು ಸಾಮಾನ್ಯ ಜಲ ವರ್ಷ ಹಾಗೂ ಸಂಕಷ್ಟದ ಜಲವರ್ಷವಲ್ಲ,” ಎಂಬ ತಪ್ಪಾದ ಊಹೆಯೊಂದಿಗೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿ ಪ್ರತಿದಿನ 24,000 ಕ್ಯೂಸೆಕ್ಸ್ ನೀರು ಬಿಡುಗಡೆಗೊಳಿಸಲು ಕ್ರಮಕ್ಕೆ ಕೋರಿದೆ ಎಂದು ಹೇಳಿದೆ.