ಕೇರಳವು ಸಾಮರಸ್ಯದಿಂದ ಬದುಕುತ್ತಿದೆ, ಸಿನಿಮಾದಲ್ಲಿ ತಪ್ಪು ಚಿತ್ರಣವಿದೆ: 'ದಿ ಕೇರಳ ಸ್ಟೋರಿ 2' ಚಿತ್ರದ ಕುರಿತು ಕೇರಳ ಹೈಕೋರ್ಟ್
►ಟೀಸರ್ ವಾಪಸ್ ಪಡೆಯಲು ಒಪ್ಪಿಕೊಂಡ ಚಿತ್ರತಂಡ
ಕೊಚ್ಚಿ: ವಿವಾದಾತ್ಮಕ ಹಿಂದಿ ಚಿತ್ರ ‘ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್’ಗೆ ನೀಡಲಾದ ಸೆನ್ಸಾರ್ ಸರ್ಟಿಫಿಕೇಟ್ ಕುರಿತಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ CBFC ಯನ್ನು ಕೇರಳ ಹೈಕೋರ್ಟ್ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಚಿತ್ರವು ‘ನಿಜವಾದ ಘಟನೆಗಳಿಂದ ಪ್ರೇರಿತ’ ಎಂದು ಹೇಳಿಕೊಳ್ಳುತ್ತಿರುವ ಹಿನ್ನೆಲೆ, ತಪ್ಪು ನಿರೂಪಣೆ ಹಾಗೂ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಸಾಧ್ಯತೆ ಕುರಿತು ಅರ್ಜಿದಾರರು ಎತ್ತಿರುವ ಕಳವಳಗಳು ಪ್ರಾಥಮಿಕವಾಗಿ ಸಮರ್ಥನೀಯವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಚಿತ್ರದ ಬಿಡುಗಡೆಯನ್ನು ತಡೆಹಿಡಿಯುವಂತೆ ಹಾಗೂ ನೀಡಲಾದ ಸೆನ್ಸಾರ್ ಸರ್ಟಿಫೀಕೇಟ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಮೂರು ಅರ್ಜಿಗಳ ವಿಚಾರಣೆ ನಡೆಸಿದರು.
“ಕೇರಳವು ಜಾತ್ಯತೀತ ರಾಜ್ಯ. ಅದು ಸಂಪೂರ್ಣ ಸಾಮರಸ್ಯದಿಂದ ಬದುಕುತ್ತಿದೆ. ಆದರೆ ರಾಜ್ಯದಾದ್ಯಂತ ಏನಾದರೂ ನಡೆಯುತ್ತಿದೆ ಎಂಬಂತೆ ಚಿತ್ರಿಸಿದಾಗ, ನೀವು ಇದನ್ನು ಪರಿಗಣಿಸಿದ್ದೀರಾ? ತಪ್ಪು ಸೂಚನೆ ಇದ್ದರೆ ಅದು ಉದ್ವಿಗ್ನತೆಯನ್ನು ಕೆರಳಿಸಬಹುದು. ಆಗ ಸೆನ್ಸಾರ್ ಮಂಡಳಿಯ ಪಾತ್ರ ಮುಖ್ಯವಾಗುತ್ತದೆ,” ಎಂದು ನ್ಯಾಯಮೂರ್ತಿ ಥಾಮಸ್ ಮೌಖಿಕವಾಗಿ ಹೇಳಿದರು.
ಚಿತ್ರದ ಶೀರ್ಷಿಕೆಯಲ್ಲಿ ‘ಕೇರಳ’ ಎಂಬ ಹೆಸರಿನ ಬಳಕೆಯನ್ನು ಉಲ್ಲೇಖಿಸಿದ ಅವರು, “ಕೇರಳ ಎಂಬ ಹೆಸರನ್ನು ಬಳಸಿರುವುದರಿಂದ ಕೇರಳದ ಜನರ ಗ್ರಹಿಕೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಸಾಮಾನ್ಯವಾಗಿ ಕಲಾತ್ಮಕ ಸೃಷ್ಟಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ನೀವು ಅದನ್ನು ನಿಜವಾದ ಘಟನೆಗಳಿಂದ ಪ್ರೇರಿತವೆಂದು ಹೇಳುತ್ತಿದ್ದರೆ, ಅದು ಕೋಮು ಉದ್ವಿಗ್ನತೆಗೆ ಕಾರಣವಾಗಬಹುದೇ ಎಂಬುದನ್ನು ಪರಿಗಣಿಸಬೇಕು,” ಎಂದು ಅವರು ತಿಳಿಸಿದರು.
ಜನಾಂಗೀಯ, ಧಾರ್ಮಿಕ ಅಥವಾ ಇತರ ಗುಂಪುಗಳನ್ನು ಅವಹೇಳನ ಮಾಡುವ ದೃಶ್ಯಗಳು ಅಥವಾ ಪದಗಳನ್ನು ನಿಷೇಧಿಸುವ CBFC ಮಾರ್ಗಸೂಚಿಗಳನ್ನು ಈ ಚಿತ್ರ ಪಾಲಿಸಿಕೊಂಡಿದೆಯೇ ಎಂಬುದನ್ನೂ ನ್ಯಾಯಾಲಯ ಪ್ರಶ್ನಿಸಿತು.“ಸೃಜನಶೀಲತೆಯ ಸ್ವಾತಂತ್ರ್ಯವಿದೆ. ಆದರೆ CBFCಗೆ ಪಾಲಿಸಬೇಕಾದ ಷರತ್ತುಗಳೂ ಇವೆ. ‘ನಿಜವಾದ ಘಟನೆ’ ಎಂದು ಹೇಳಿದಾಗ ಅದರ ಪರಿಣಾಮ ಗಂಭೀರವಾಗಬಹುದು,” ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.
ಚಿತ್ರದ ನಿರ್ಮಾಪಕರ ಪರ ವಾದಿಸಿದ ಹಿರಿಯ ವಕೀಲ ಎಸ್. ಶ್ರೀಕುಮಾರ್, ನ್ಯಾಯಾಲಯ ತೀರ್ಪು ನೀಡುವವರೆಗೆ ಈಗಾಗಲೇ ಬಿಡುಗಡೆಯಾದ ಟೀಸರ್ ಗಳನ್ನು ತೆಗೆದುಹಾಕಲು ಒಪ್ಪಿಕೊಂಡರು. ಪ್ರಕರಣ ತೀರ್ಮಾನಿಸುವ ಮೊದಲು ಚಿತ್ರವನ್ನು ನ್ಯಾಯಾಲಯವೇ ವೀಕ್ಷಿಸಲು ಸ್ಕ್ರೀನಿಂಗ್ ವ್ಯವಸ್ಥೆ ಮಾಡಬಹುದೆಂದು ನ್ಯಾಯಮೂರ್ತಿ ಸೂಚಿಸಿದರು. ಮಧ್ಯಾಹ್ನ 2 ಗಂಟೆಗೆ ವಿಚಾರಣೆಯನ್ನು ಮುಂದುವರಿಸಲು ನ್ಯಾಯಾಲಯ ನಿರ್ಧರಿಸಿತು.