ಮನ್ ಕಿ ಬಾತ್‌ನಲ್ಲಿ ʼಮಧು ಕೀ ಬಾತ್ʼ ಮಾಡಿದ ಪ್ರಧಾನಿ ಮೋದಿ; ಪುತ್ತೂರಿನ ‘ಗ್ರಾಮಜನ್ಯ’ ಜೇನುತುಪ್ಪಕ್ಕೆ ಭೇಷ್
ತುಮಕೂರಿನ ಶಿವಗಂಗಾ ಕಲಾಂಜಿಯಾ ರೈತ ಸಂಘಟನೆಯ ಕಾರ್ಯಕ್ಕೂ ಮೆಚ್ಚುಗೆ
Photo credit: x/@narendramodi
ಹೊಸದಿಲ್ಲಿ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ, ಸಸ್ಯವರ್ಗವು ಜೇನು ಉತ್ಪಾದನೆಗೆ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿದೆ. ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಗ್ರಾಮಜನ್ಯ’ ರೈತರ ಸಂಘಟನೆಯ ಜೇನುತುಪ್ಪ ಉತ್ಪಾದನೆ ರಾಷ್ಟ್ರಮಟ್ಟದಲ್ಲಿ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ತಮ್ಮ ಮಾಸಿಕ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶ್ಲಾಘಿಸಿದರು.
ಆಧುನಿಕ ಸಂಸ್ಕರಣಾ ಘಟಕ, ಬಾಟಲ್, ಸಂಗ್ರಹಣೆ, ಡಿಜಿಟಲ್ ಟ್ರ್ಯಾಕಿಂಗ್ ಸೌಲಭ್ಯಗಳ ಮೂಲಕ ಗ್ರಾಮಾಂತರದಿಂದಲೇ ಬ್ರಾಂಡ್ ಜೇನುತುಪ್ಪ ನಗರ ಮಾರುಕಟ್ಟೆ ತಲುಪುತ್ತಿರುವುದನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ಈ ಯೋಜನೆಯಿಂದ ಎರಡು ಸಾವಿರಕ್ಕೂ ಹೆಚ್ಚು ರೈತರು ನೇರವಾಗಿ ಪ್ರಯೋಜನ ಪಡೆದಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.
ಕರ್ನಾಟಕದ ತುಮಕೂರು ಜಿಲ್ಲೆಯ ಶಿವಗಂಗಾ ಕಲಾಂಜಿಯಾ ರೈತ ಸಂಘಟನೆಯ ಕಾರ್ಯವನ್ನೂ ಪ್ರಧಾನಿ ಪ್ರಶಂಸಿಸಿದರು. “ಸದಸ್ಯರಿಗೆ ಎರಡು ಜೇನುಪೆಟ್ಟಿಗೆಗಳಿಂದ ಆರಂಭವಾದ ಈ ಉಪಕ್ರಮ ಇಂದು ಒಟ್ಟಾಗಿ ಜೇನು ಸಂಗ್ರಹ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯ ರೈತರಿಗೆ ಲಕ್ಷಾಂತರ ಆದಾಯ ತಂದುಕೊಡುತ್ತಿದೆ,” ಎಂದು ಅವರು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ದೇಶದ ಜೇನುತುಪ್ಪ ಉತ್ಪಾದನೆಯ ಏರಿಕೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, “ಕಳೆದ ವರ್ಷಗಳಲ್ಲಿ 76 ಸಾವಿರ ಮೆಟ್ರಿಕ್ ಟನ್ ಇದ್ದ ಉತ್ಪಾದನೆ ಇಂದು 15 ಲಕ್ಷ ಮೆಟ್ರಿಕ್ ಟನ್‌ಗೆ ಏರಿದೆ. ರಫ್ತೂ ಮೂರು ಪಟ್ಟು ಹೆಚ್ಚಾಗಿದೆ. ಹನಿ ಮಿಷನ್ ಯೋಜನೆಯಡಿ ಖಾದಿ ಗ್ರಾಮೋದ್ಯೋಗವು 2.25 ಲಕ್ಷಕ್ಕೂ ಹೆಚ್ಚು ಜೇನುಪೆಟ್ಟಿಗೆಗಳನ್ನು ವಿತರಿಸಿರುವುದು ಸಾವಿರಾರು ಕುಟುಂಬಗಳಿಗೆ ಹೊಸ ಉದ್ಯೋಗ ಸೃಷ್ಟಿಸಿದೆ”, ಎಂದು ಹೇಳಿದರು.
ಜಮ್ಮು–ಕಾಶ್ಮೀರದ ಗುಡ್ಡಗಾಡು ಪ್ರದೇಶಗಳಲ್ಲಿ ಜೇನುನೊಣಗಳು ಕಾಡು ತುಳಸಿಯಿಂದ ವಿಶಿಷ್ಟವಾದ ಜೇನುತುಪ್ಪವನ್ನು ಉತ್ಪಾದಿಸುತ್ತವೆ.ಇದು ಬಿಳಿ ಬಣ್ಣವನ್ನು ಹೊಂದಿದೆ, ಇದನ್ನು ರಂಬನ್ ಸುಲೈ ಜೇನುತುಪ್ಪ ಎಂದು ಕರೆಯಲಾಗುತ್ತದೆ. ಕೆಲವು ವರ್ಷಗಳ ಹಿಂದೆ, ರಂಬನ್ ಸುಲೈ ಹನಿಗೆ ಜಿಐ ಟ್ಯಾಗ್ ನೀಡಲಾಗಿದೆ. ದೇಶಾದ್ಯಂತ ಈ ಜೇನು ತುಪ್ಪಕ್ಕೆ ದೊಡ್ಡ ಮಟ್ಟದ ಬೇಡಿಕೆಯಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ನಾಗಾಲ್ಯಾಂಡ್ ನ ಖಿಯೋಮ್ನಿ–ಯಂಗನ್ ಬುಡಕಟ್ಟು ಜನರ ಬಂಡೆ-ಜೇನು ಸಂಗ್ರಹ ಪರಂಪರೆಯನ್ನು ಉಲ್ಲೇಖಿಸಿದ ಪ್ರಧಾನಿ, “ಎತ್ತರದ ಬಂಡೆಗಳ ಮೇಲೆ ಗೂಡು ಕಟ್ಟುವ ಜೇನುನೊಣಗಳಿಂದ ಜೇನು ಹೊರತೆಗೆಯುವುದು ಅಪಾಯಕಾರಿ. ಆದರೂ ಸ್ಥಳೀಯರು ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸಿ ಈ ಸಂಪ್ರದಾಯವನ್ನು ನಿರಂತರವಾಗಿ ಉಳಿಸಿಕೊಂಡಿದ್ದಾರೆ,” ಎಂದು ವಿಶಿಷ್ಟ ಜೇನು ಸಂಗ್ರಹದ ಕುರಿತು ವಿವರಿಸಿದರು.