ಅಭ್ಯಾಸದ ವೇಳೆ ಬಾಸ್ಕೆಟ್ ಬಾಲ್ ಕಂಬ ಮೈಮೇಲೆ ಬಿದ್ದು ರಾಷ್ಟ್ರಮಟ್ಟದ ಆಟಗಾರ ಮೃತ್ಯು
ರೋಹ್ಟಕ್ | Photo Credit : X
ಚಂಡೀಗಢ: ಬಾಸ್ಕೆಟ್ ಬಾಲ್ ಅಭ್ಯಾಸದ ವೇಳೆ ಬಾಸ್ಕೆಟ್ ಬಾಲ್ ಕಂಬ ಎದೆಯ ಮೇಲೆ ಬಿದ್ದ ಪರಿಣಾಮ, 16 ವರ್ಷದ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಪಟುವೊಬ್ಬ ಮೃತಪಟ್ಟಿರುವ ಘಟನೆ ಹರ್ಯಾಣದ ರೋಹ್ಟಕ್ ನಲ್ಲಿ ನಡೆದಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಹಿಂದೆ ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡಿದ್ದ 16 ವರ್ಷದ ಹಾರ್ದಿಕ್ ಎಂಬ ಬಾಲಕ ಮೃತಪಟ್ಟಿದ್ದಾನೆ.
ಬಾಸ್ಕೆಟ್ ಬಾಲ್ ಕಂಬದ ಬುಟ್ಟಿಗೆ ಬಾಲ್ ಹಾಕಲು ಪ್ರಯತ್ನಿಸಿ, ಅದರಿಂದ ನೇತಾಡಲು 16 ವರ್ಷದ ಹಾರ್ದಿಕ್ ಮುಂದಾದಾಗ, ಕಂಬ ಮುರಿದು ಆತನ ಮೇಲೆ ಬಿದ್ದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.
ತಕ್ಷಣವೇ ಲಖನ್ ಮಾರ್ಜ ಗ್ರಾಮದಲ್ಲಿರುವ ಕ್ರೀಡಾ ಸಂಕೀರ್ಣದ ಒಂದು ಬದಿಯಲ್ಲಿ ಕುಳಿತಿದ್ದ ಇತರ ಆಟಗಾರರು ಆತನನ್ನು ಆಸ್ಪತ್ರೆಗೆ ಕೊಂಡೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಠಾಣಾಧಿಕಾರಿ ಸಮರ್ ಜೀತ್ ಸಿಂಗ್ ತಿಳಿಸಿದ್ದಾರೆ.
ಬಾಸ್ಕೆಟ್ ಬಾಲ್ ಕಂಬ ಮುರಿದು ಬೀಳಲು ಕಾರಣವೇನು ಹಾಗೂ ಬಾಸ್ಕೆಟ್ ಬಾಲ್ ಸಾಧನದ ಸುಸ್ಥಿತಿಯ ಕುರಿತು ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, “ಮೊದಲ ಈ ಘಟನೆಗೆ ಸಂಬಂಧಿಸಿದ ವಿವರಗಳನ್ನು ಕಲೆ ಹಾಕಲಾಗುವುದು” ಎಂದು ತಿಳಿಸಿದ್ದಾರೆ.