16 ಉಪರಾಷ್ಟ್ರಪತಿ ಚುನಾವಣೆಗಳ ಪೈಕಿ 4 ಅವಿರೋಧ ಆಯ್ಕೆ
PC: x.com/VoterMood/mshahi0024
ಹೊಸದಿಲ್ಲಿ: ಸ್ವಾತಂತ್ರ್ಯಾ ನಂತರ ನಡೆದ 16 ಉಪರಾಷ್ಟ್ರಪತಿ ಚುನಾವಣೆಗಳ ಪೈಕಿ ನಾಲ್ಕು ಬಾರಿ ದೇಶದ ಎರಡನೇ ಅತ್ಯುನ್ನತ ಹುದ್ದೆಗೆ ಅವಿರೋಧ ಆಯ್ಕೆ ನಡೆದಿದೆ. ಮೂರು ಬಾರಿ ವಿರೋಧಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದರೆ, ಒಮ್ಮೆ ಯಾವುದೇ ಇತರ ಅಭ್ಯರ್ಥಿ ನಾಮಪತ್ರ ಸಲ್ಲಿಸಿದೇ ಅವಿರೋಧ ಆಯ್ಕೆಯಾಗಿತ್ತು.
ವಿರೋಧಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಎಸ್.ರಾಧಾಕೃಷ್ಣನ್ ಅವರು 1952ರಲ್ಲಿ ಮೊದಲ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ 1957ರಲ್ಲಿ ಅವರ ನಾಮಪತ್ರ ಮಾತ್ರ ಸಿಂಧು ಆಗಿದ್ದರಿಂದ ಮತ್ತೆ ಅವಿರೋಧ ಆಯ್ಕೆ ನಡೆದಿತ್ತು. 1979ರಲ್ಲಿ ಮೊಹ್ಮದ್ ಹಿದಾಯತ್ತುಲ್ಲಾ ಅವಿರೋಧವಾಗಿ ಆಯ್ಕೆಯಾದರು. 1987ರಲ್ಲಿ ಶಂಕರ್ ದಯಾಳ್ ಶರ್ಮಾ ವಿರುದ್ಧ ಸ್ಪರ್ಧಿಸಿದ್ದ 26 ಮಂದಿಯ ನಾಮಪತ್ರಗಳು ತಿರಸ್ಕೃತಗೊಂಡು ಅವರು ಅವಿರೋಧವಾಗಿ ಆಯ್ಕೆಯಾದರು.
ಹತ್ತು ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಇಬ್ಬರು ಸ್ಪರ್ಧಿಗಳಿದ್ದರೆ, ಉಳಿದಂತೆ ಒಂದು ಬಾರಿ ಆರು ಮಂದಿ ಹಾಗೂ ಮತ್ತೊಮ್ಮೆ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದರು. ಐವರು ಉಪರಾಷ್ಟ್ರಪತಿಗಳು ತಮ್ಮ ಅವಧಿ ಕೊನೆಗೊಳ್ಳುವ ಮುನ್ನವೇ ಹುದ್ದೆಯಿಂದ ನಿರ್ಗಮಿಸಿದ್ದರು. ಕೃಷ್ಣಕಾಂತ್ ಅವರ ಅಕಾಲಿಕ ನಿಧನದಿಂದ 2002ರಲ್ಲಿ ಅವರ ಹುದ್ದೆ ತೆರವಾಗಿತ್ತು. ವಿ.ವಿ.ಗಿರಿ, ಆರ್.ವೆಂಕಟರಮಣ ಮತ್ತು ಶಂಕರ ದಯಾಳ್ ಶರ್ಮಾ ಅವರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ಕ್ರಮವಾಗಿ 1969, 1987 ಮತ್ತು 1992ರಲ್ಲಿ ರಾಜೀನಾಮೆ ನೀಡಿದ್ದರು. ಜಗದೀಪ್ ಧನ್ಕರ್ ಕಳೆದ ವಾರ ಅನಾರೋಗ್ಯದ ಕಾರಣ ನೀಡಿ ಹುದ್ದೆ ತ್ಯಜಿಸಿದ್ದರು.
ಇದುವರೆಗೆ ನಡೆದ 16 ಉಪರಾಷ್ಟ್ರಪತಿ ಚುನಾವಣೆಗಳ ಕುತೂಹಲಕರ ಮಾಹಿತಿಯು 17ನೇ ಉಪರಾಷ್ಟ್ರಪತಿ ಚುನಾವಣೆಗೆ ಪೂರ್ವಭಾವಿಯಾಗಿ ಚುನಾವಣಾ ಆಯೋಗ ಪ್ರಕಟಿಸಿದ ಕಿರುಹೊತ್ತಗೆಯಲ್ಲಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ, ಚುನಾವಣೆಗೆ ಸಂಬಂಧಿಸಿದ ಸಂವಿಧಾನಾತ್ಮಕ ನಿಬಂಧನೆಗಳು, ಮತದಾನ ವ್ಯವಸ್ಥೆ ಮತ್ತು ಈ ಹಿಂದಿನ ಚುನಾವಣೆಗಳ ವಿವರಗಳನ್ನು ಸರಳ ಭಾಷೆಯಲ್ಲಿ ನೀಡಲಾಗಿದೆ.