ಉ.ಪ್ರ.: ಜಮೀನು ವಿವಾದದಲ್ಲಿ 6 ಮಂದಿಯ ಭೀಕರ ಹತ್ಯೆ
Photo: PTI
ಲಕ್ಕೋಅ.2: ಜಮೀನು ವಿವಾದಕ್ಕೆ ಸಂಬಂಧಿಸಿದ ಕಲಹವೊಂದ ರಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಸೇರಿದಂತೆ 6 ಮಂದಿ ದಾರುಣವಾಗಿ ಹತ್ಯೆಯಾದ ಘಟನೆ ಉತ್ತರಪ್ರದೇಶದ ದಿಯೋರಿಯಾ ಜಿಲ್ಲೆಯಲ್ಲಿ ಸೋಮವಾರ ವರದಿಯಾಗಿದೆ.
ಲೆಕ್ಟ್ರಾ ತೊಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಜಿ ಜಿಲ್ಲಾಪಂಚಾಯತ್ ಸದಸ್ಯ ಪ್ರೇಮ್ ಯಾದವ್ (50), ಒಂದು ತುಂಡು ಜಮೀನಿನ ವಿವಾದಕ್ಕೆ ಸಂಬಂಧಿಸಿದ ಮಾತುಕತೆಗಾಗಿ ಸತ್ಯಪ್ರಕಾಶ್ ದುಬೆ (54) ಎಂಬಾತನ ಮನೆಗೆ ಭೇಟಿ ನೀಡಿದ್ದರು. ಆದರೆ ಆಸ್ತಿವಿವಾದದ ಕುರಿತ ಚರ್ಚೆ ವಾಗ್ವಾದಕ್ಕೆ ತಿರುಗಿತು. ಉದ್ರಿಕ್ತನಾದ ಸತ್ಯಪ್ರಕಾಶ್ ದುಬೆ ಹಾಗೂ ಪ್ರೇಮ್ ಯಾದವ್ ನ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಯಾದವ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಕೆಲವೇ ತಾಸುಗಳ ಬಳಿಕ ಮೃತ ಯಾದವ್ ಬೆಂಬಲಿಗರು ಮಾರಕಾಯುಧಗಳೊಂದಿಗೆ ಅಭಯ್ಪುರದಲ್ಲಿರುವ ದುಬೆ ನಿವಾಸಕ್ಕೆ ಮುತ್ತಿಗೆಹಾಕಿದರು. ಅಲ್ಲಿದ್ದದುಬೆ ಹಾಗೂ ಪುಟ್ಟಮಕ್ಕಳು ಸೇರಿದಂತೆ ಆತನ ಕುಟುಂಬದ ಐವರು ಸದಸ್ಯರನ್ನು ಕಡಿದು ಹತ್ಯೆಗೈದಿದ್ದಾರೆ.
ದುಬೆ ಅಲ್ಲದೆ ಆತನ ಪತ್ನಿ ಕಿರಣ್ ದುಬೆ, ಪುತ್ರಿಯರಾದ ಸಲೋನಿ (18), ನಂದನಿ (10) ಹಾಗೂ ಗಾಂಧಿ (15) ಅವರನ್ನು ದಾಳಿಕೋರರು ಕೊಂದುಹಾಕಿದ್ದಾರೆ. ದುಬೆಯವರ ಇನ್ನೋರ್ವ ಪುತ್ರ 8 ವರ್ಷದ ಅನ್ಮೋಲ್ ದಾಳಿಯಲ್ಲಿ ಗಾಯಗೊಂಡಿದ್ದಾನೆ. ಆತನನ್ನು ಗೋರಖ್ಪುರದ ಬಿಆರ್ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಾಲಕನ ಪರಿಸ್ಥಿತಿ ಚಿಂತಾಜನಕವಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ. ಹತ್ಯಾಕಾಂಡಕ್ಕೆ ಸಂಬಂಧಿಸಿ 14 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಎಸ್ಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ದೀರ್ಘಸಮಯದಿಂದ ಹೊಗೆಯಾಡುತ್ತಿದ್ದ ಶತ್ರುತ್ವವೇ ಹತ್ಯಾಕಾಂಡಕ್ಕೆ ಕಾರಣವೆಂದು ಅವರು ಹೇಳಿದ್ದಾರೆ. ಹತ್ಯೆಯಾದ ಸತ್ಯಪ್ರಕಾಶ್ ದುಬೆ ಅವರ ಸಹೋದರ ಸಾಧು ದುಬೆ ಅವರು ತನ್ನ ಜಮೀನನ್ನು ಪ್ರೇಮ್ಚಂದ್ ಯಾದವ್ ಅವರಿಗೆ ಮಾರಾಟ ಮಾಡಿದ ಬಳಿಕ ಎರಡು ಕುಟುಂಬಗಳ ನಡುವೆ ವೈಮನಸ್ಸು ಉಂಟಾಗಿತ್ತೆಂದು ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.