ಪುಣೆ ಬಳಿ ಸೇತುವೆ ಕುಸಿದು 6 ಮಂದಿ ಮೃತ್ಯು; ಮುಂದುವರಿದ ರಕ್ಷಣಾ ಕಾರ್ಯಾಚರಣೆ
Update: 2025-06-15 17:13 IST
PC | NDTV
ಪುಣೆ: ಇಲ್ಲಿನ ಇಂದ್ರಯಾಣಿ ನದಿಗೆ ನಿರ್ಮಿಸಲಾದ ಸೇತುವೆ ಕುಸಿದು ಆರು ಪ್ರವಾಸಿಗರು ಮುಳುಗಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಶಂಕೆ ವ್ಯಕ್ತವಾಗಿದೆ.
ಮಳೆಗಾಲದಲ್ಲಿ ಹೆಚ್ಚಿನ ಜನಸಂದಣಿಯನ್ನು ಹೊಂದಿರುವ ಜನಪ್ರಿಯ ಪ್ರವಾಸಿ ತಾಣವಾದ ಕುಂಡ್ಮಲದಿಂದ ಈ ಘಟನೆ ರವಿವಾರ ವರದಿಯಾಗಿದೆ. ಸೇತುವೆ ಕುಸಿದ ಸಮಯದಲ್ಲಿ ಸೇತುವೆಯಲ್ಲಿದ್ದ ಸುಮಾರು 15 ರಿಂದ 20 ಪ್ರವಾಸಿಗರು ನದಿಗೆ ಬಿದ್ದು ಕೊಚ್ಚಿ ಹೋಗಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸೇರಿದಂತೆ ಪೊಲೀಸರು ಮತ್ತು ವಿಪತ್ತು ಪರಿಹಾರ ಕಾರ್ಯಕರ್ತರು ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇಲ್ಲಿಯವರೆಗೆ ಎಂಟು ಜನರನ್ನು ರಕ್ಷಿಸಲಾಗಿದ್ದು, ಇಬ್ಬರು ಮಹಿಳೆಯರು ಇನ್ನೂ ಸೇತುವೆಯ ಕೆಳಗೆ ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.