ಗುರುತನ್ನು ಮರೆಮಾಚಿ ಮಹಿಳೆಯನ್ನು ಮದುವೆಯಾಗುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆವಿಧಿಸುವ ಹೊಸ ಮಸೂದೆ ಪರಿಚಯ
ಹೊಸದಿಲ್ಲಿ: ಗುರುತನ್ನು ಮರೆಮಾಚುವ ಮೂಲಕ ಮಹಿಳೆಯನ್ನು ಮದುವೆಯಾಗುವುದು, ಬಡ್ತಿ ಹಾಗೂ ಉದ್ಯೋಗದ ಸುಳ್ಳು ಭರವಸೆಯಡಿಯಲ್ಲಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುವ ಮಸೂದೆಯನ್ನು ಶುಕ್ರವಾರ ಸಂಸತ್ತಿನಲ್ಲಿ ಪರಿಚಯಿಸಲಾಗಿದ್ದು,ಈ ಮಸೂದೆ ಮೊದಲ ಬಾರಿಗೆ ಈ ಅಪರಾಧಗಳನ್ನು ಎದುರಿಸಲು ನಿರ್ದಿಷ್ಟ ನಿಬಂಧನೆಯನ್ನು ಪ್ರಸ್ತಾಪಿಸುತ್ತದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ 1860 ರ ಭಾರತೀಯ ದಂಡ ಸಂಹಿತೆ (IPC) ಬದಲಿಗೆ ಭಾರತೀಯ ನ್ಯಾಯ ಸಂಹಿತಾ (BNS) ಮಸೂದೆಯನ್ನು ಮಂಡಿಸಿದರು. ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ನಿಬಂಧನೆಗಳಿಗೆ ವಿಶೇಷ ಗಮನ ನೀಡಲಾಗಿದೆ ಎಂದು ಹೇಳಿದರು.
"ಮಹಿಳೆಯರ ಮೇಲಿನ ಅಪರಾಧ ಹಾಗೂ ಅವರು ಎದುರಿಸುತ್ತಿರುವ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಈ ಮಸೂದೆಯಲ್ಲಿ ತಿಳಿಸಲಾಗಿದೆ. ಮದುವೆ, ಉದ್ಯೋಗ, ಬಡ್ತಿ ಮತ್ತು ಸುಳ್ಳು ಗುರುತಿನ ಸುಳ್ಳು ಭರವಸೆಯಡಿಯಲ್ಲಿ ಮಹಿಳೆಯರೊಂದಿಗೆ ದೈಹಿಕ ಸಂಪರ್ಕವು ಇದೇ ಮೊದಲ ಬಾರಿಗೆ ಅಪರಾಧವಾಗುತ್ತದೆ" ಎಂದು ಅವರು ಹೇಳಿದರು.