ಭಾರತೀಯ ಸೌರಶಕ್ತಿ ನಿಗಮದ ಅಧ್ಯಕ್ಷ ಸ್ಥಾನದಿಂದ ರಾಮೇಶ್ವರ ಪ್ರಸಾದ್ ವಜಾ
Photo | PTI
ಹೊಸದಿಲ್ಲಿ: ಕೇಂದ್ರ ಸರಕಾರ ಮೇ 10ರಂದು ಭಾರತೀಯ ಸೌರಶಕ್ತಿ ನಿಗಮದ(SECI) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಮೇಶ್ವರ ಪ್ರಸಾದ್ ಗುಪ್ತಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಿತು. ಇದು ವಿವಾದಕ್ಕೆ ಕಾರಣವಾಗಿದೆ. ಗುಪ್ತಾ ಅವರನ್ನು ವಜಾಗೊಳಿಸಲು ಕಾರಣವನ್ನು ಆದೇಶದಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್, ಭಾರತೀಯ ಸೌರಶಕ್ತಿ ನಿಗಮದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಆರ್ ಪಿ ಗುಪ್ತಾ ಅವರನ್ನು ವಜಾಗೊಳಿಸುವುದರೊಂದಿಗೆ ಅದಾನಿ ಹಗರಣವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.
2024ರ ನವೆಂಬರ್ 20ರಂದು ಅಮೆರಿಕದ ಅಧಿಕಾರಿಗಳು ಗೌತಮ್ ಅದಾನಿ ಮತ್ತು ಅವರ ಆಪ್ತರ ವಿರುದ್ಧದ ಆರೋಪಪಟ್ಟಿಯಲ್ಲಿ ಸಾರ್ವಜನಿಕ ವಲಯದ ಭಾರತೀಯ ಸೌರಶಕ್ತಿ ನಿಗಮದ (SECI) ವಿರುದ್ಧ ದೋಷಾರೋಪಣೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
SECI ಶಿಫಾರಸಿನ ಮೇರೆಗೆ ವಿವಿಧ ರಾಜ್ಯಗಳು ಅದಾನಿ ಜೊತೆ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿವೆ. ಈ ಒಪ್ಪಂದಗಳಿಗೆ ಪ್ರತಿಯಾಗಿ 2,029 ಕೋಟಿ ರೂ. ಲಂಚವನ್ನು ನೀಡುವ ಭರವಸೆ ನೀಡಲಾಯಿತು. ನಂತರ ಅವುಗಳನ್ನು ಅಂತಿಮಗೊಳಿಸಲಾಯಿತು ಎಂದು ರಮೇಶ್ ಹೇಳಿದರು.
ಭ್ರಷ್ಟಾಚಾರವನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಡಿಸೆಂಬರ್ 2024ರಲ್ಲಿ SECI ವಿದ್ಯುತ್ ಟೆಂಡರ್‌ಗಳನ್ನು ನೀಡುವ ವಿಧಾನವನ್ನು ಬದಲಾಯಿಸಿತು. ಈಗ ಮೋದಿ ಸರಕಾರದಿಂದಲೇ ನೇಮಕಗೊಂಡ SECIಯ CMD ಅವರನ್ನು ಅಧಿಕಾರಾವಧಿ ಮುಗಿಯುವ ಒಂದು ತಿಂಗಳ ಮೊದಲು ವಜಾಗೊಳಿಸಲಾಗಿದೆ ಎಂದು ಜೈರಾಮ್ ರಮೇಶ್ ಹೇಳಿದರು.