ವಿಮಾನ ನಿಲ್ದಾಣ ಬಳಿಯ ಅಡೆತಡೆಗಳನ್ನು ಕೆಡವಲು ನಿಯಮಗಳನ್ನು ಹೊರಡಿಸಿದ ಕೇಂದ್ರ ಸರಕಾರ: ವರದಿ
PC : PTI
ಹೊಸದಿಲ್ಲಿ: ಕೇಂದ್ರ ಸರಕಾರವು ಗುರುವಾರ ವಿಮಾನ(ಕಟ್ಟಡಗಳು ಮತ್ತು ಮರಗಳು ಇತ್ಯಾದಿಗಳಿಂದ ಉಂಟಾಗುವ ಅಡೆತಡೆಗಳನ್ನು ಕೆಡವುವುದು) ನಿಯಮಗಳು, 2025ನ್ನು ಅಧಿಸೂಚಿಸಿದೆ. ಅಹ್ಮದಾಬಾದ್ ಏರ್‌ಇಂಡಿಯಾ ದುರಂತ ಸಂಭವಿಸಿದ ಒಂದು ವಾರದ ಬಳಿಕ ಈ ಅಧಿಸೂಚನೆ ಹೊರಬಿದ್ದಿದೆ ಎಂದು thewire.in ವರದಿ ಮಾಡಿದೆ.
ನಾಗರಿಕ ವಾಯುಯಾನ ಅಧಿಕಾರಿಗಳಿಂದ ಆದೇಶವನ್ನು ಸ್ವೀಕರಿಸಿದ 60 ದಿನಗಳಲ್ಲಿ ವಿಮಾನ ನಿಲ್ದಾಣಕ್ಕೆ ಅಡ್ಡಿಯನ್ನುಂಟು ಮಾಡುವ ಕಟ್ಟಡ ಅಥವಾ ಮರಗಳ ಮಾಲಕರು ಅವುಗಳನ್ನು ಕೆಡವಬೇಕು(ಅಥವಾ ಆದೇಶದಂತೆ ಎತ್ತರವನ್ನು ತಗ್ಗಿಸಬೇಕು) ಎಂದು ನೂತನ ನಿಯಮಗಳು ಹೇಳುತ್ತವೆ.
ವಿಮಾನ ನಿಲ್ದಾಣದ ಉಸ್ತುವಾರಿ ಅಧಿಕಾರಿಯಿಂದ ವರದಿಯನ್ನು ಸ್ವೀಕರಿಸಿದ ಬಳಿಕ ತನ್ನ ಜಿಲ್ಲೆಯಲ್ಲಿ ಯಾವುದೇ ಅನಧಿಕೃತ ನಿರ್ಮಾಣವನ್ನು ನೆಲಸಮಗೊಳಿಸುವ ಸಂದರ್ಭದಲ್ಲಿ ಅನುಸರಿಸುವ ಕಾರ್ಯವಿಧಾನವನ್ನೇ ಬಳಸಿ ಕಟ್ಟಡವನ್ನು ನೆಲಸಮ, ಮರಗಳ ಕಡಿತ ಅಥವಾ ಕಟ್ಟಡದ ಎತ್ತರವನ್ನು ಕಡಿಮೆ ಮಾಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ನೂತನ ನಿಯಮಗಳ ಪ್ರಕಾರ, ಅಡೆತಡೆಗಳು ಕೆಡವಲು ಅರ್ಹವಾಗಿವೆಯೇ ಎನ್ನುವುದನ್ನು ಪರಿಶೀಲಿಸಲು ಅಧಿಕಾರಿಗಳು ಮಾಲಿಕರಿಗೆ ಪೂರ್ವ ಮಾಹಿತಿಯನ್ನು ನೀಡಿ ಹಗಲು ವೇಳೆಯಲ್ಲಿ ಆವರಣಗಳನ್ನು ಪ್ರವೇಶಿಸಬಹುದು. ಮಾಲಕರು ಸಹಕರಿಸದಿದ್ದರೆ ಅಧಿಕಾರಿಗಳು ಲಭ್ಯ ಮಾಹಿತಿಯ ಆಧಾರದಲ್ಲಿ ಮುಂದುವರಿಯಬಹುದು ಮತ್ತು ವಿಷಯವನ್ನು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ಕ್ಕೆ ಉಲ್ಲೇಖಿಸಬಹುದು.
ಮಾಲಕರು ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಬಹುದು ಮತ್ತು ಭಾರತೀಯ ವಾಯುಯಾನ ಅಧಿನಿಯಮ,2024ರ ಕಲಂ 22ರಡಿ ಪರಿಹಾರವನ್ನು ಪಡೆಯಬಹುದು.