‘ಆಪರೇಶನ್ ಸಿಂಧೂರ’ ಸರಕಾರದ ಗುಪ್ತಚರ ವೈಫಲ್ಯದ ಫಲಿತಾಂಶ: ಅಖಿಲೇಶ್ ಯಾದವ್
ಅಖಿಲೇಶ್ ಯಾದವ್ | PC : PTI
ಹೊಸದಿಲ್ಲಿ, ಜು. 29: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ನಡೆದ ‘ಆಪರೇಶನ್ ಸಿಂಧೂರ’ ಸೇನಾ ಕಾರ್ಯಾಚರಣೆಯು ಸರಕಾರದ ಗುಪ್ತಚರ ವೈಫಲ್ಯದ ಫಲಿತಾಂಶವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ‘ಆಪರೇಶನ್ ಸಿಂಧೂರ’ದ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನದೊಂದಿಗಿನ ಯುದ್ಧವನ್ನು ಹಠಾತ್ತನೆ ಕೊನೆಗೊಳಿಸಿರುವುದನ್ನೂ ಪ್ರಶ್ನಿಸಿದರು. ‘‘ಯಾರ ಒತ್ತಡದಲ್ಲಿ ಯುದ್ಧವನ್ನು ನಿಲ್ಲಿಸಲಾಯಿತು?’’ ಎಂದು ಅವರು ಪ್ರಶ್ನಿಸಿದರು.
ಭಾರತದ ವಿದೇಶ ನೀತಿಯು ಸಂಪೂರ್ಣವಾಗಿ ಕುಸಿದಿದೆ ಎಂದು ಹೇಳಿದ ಅವರು, ಚೀನಾವು ‘‘ರಾಕ್ಷಸ’’ನಾಗಿದ್ದು ಅದು ನಮ್ಮ ಮಾರುಕಟ್ಟೆ ಮತ್ತು ಭೂಮಿಯನ್ನು ಆಪೋಶನ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
‘‘ಪಹಲ್ಗಾಮ ದಾಳಿಗೆ ಕಾರಣವಾದ ಗುಪ್ತಚರ ವೈಫಲ್ಯದ ಹೊಣೆಯನ್ನು ಯಾರು ವಹಿಸಿಕೊಳ್ಳುತ್ತಾರೆ?’’ ಎಂದು ಪ್ರಶ್ನಿಸಿದ ಅವರು, ಆ ದುರಂತ ಘಟನೆ ಯಾವತ್ತೂ ನಡೆಯಬಾರದಿತ್ತು ಎಂದು ಹೇಳಿದರು.
ಆ ಭದ್ರತಾ ಮತ್ತು ಗುಪ್ತಚರ ವೈಫಲ್ಯದಿಂದಾಗಿ ನಮ್ಮ ಅಮೂಲ್ಯ ಜೀವಗಳು ಬಲಿಯಾದವು ಮತ್ತು ಅದು ನಮ್ಮ ಗಡಿ ತಂತ್ರಗಾರಿಕೆಯ ದೌರ್ಬಲ್ಯಗಳನ್ನು ತೆರೆದಿಟ್ಟಿತು ಎಂದು ಅಖಿಲೇಶ್ ಯಾದವ್ ನುಡಿದರು.
‘‘ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ನಡೆದ ಆಪರೇಶನ್ ಸಿಂಧೂರ ಸೇನಾ ಕಾರ್ಯಾಚರಣೆಯು ಸರಕಾರದ ಗುಪ್ತಚರ ವೈಫಲ್ಯದ ಸಂಕೇತವಾಗಿದೆ’’ ಎಂದರು.