"ಸಿಜೆಐ ಗವಾಯಿ ಮೇಲಿನ ದಾಳಿ ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ”: ಪ್ರಧಾನಮಂತ್ರಿ ಮೋದಿ ಖಂಡನೆ
ನರೇಂದ್ರ ಮೋದಿ , ಬಿ.ಆರ್. ಗವಾಯಿ | Photo Credit : PTI
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಆವರಣದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ನಡೆದ ದಾಳಿಯ ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಘಟನೆಯ ಕೆಲವೇ ಗಂಟೆಗಳ ಬಳಿಕ ಪ್ರಧಾನಿಯವರು ಸಿಜೆಐ ಗವಾಯಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಧೈರ್ಯ ತುಂಬಿದರು ಎಂದು ತಿಳಿದು ಬಂದಿದೆ.
ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿಯವರು, “ಸುಪ್ರೀಂ ಕೋರ್ಟ್‌ನಲ್ಲಿ ಸಿಜೆಐ ಗವಾಯಿ ಅವರ ಮೇಲೆ ನಡೆದ ದಾಳಿ ಪ್ರತಿಯೊಬ್ಬ ಭಾರತೀಯನಿಗೆ ಆಘಾತವನ್ನುಂಟುಮಾಡಿದೆ. ಸಮಾಜದಲ್ಲಿ ಇಂತಹ ಖಂಡನೀಯ ಕೃತ್ಯಗಳಿಗೆ ಯಾವುದೇ ಸ್ಥಾನವಿಲ್ಲ. ಇದು ಸಂಪೂರ್ಣವಾಗಿ ಅಸ್ವೀಕಾರಾರ್ಹ,” ಎಂದು ಹೇಳಿದ್ದಾರೆ.
ದಾಳಿಯ ವೇಳೆ ವಿಚಲಿತರಾಗದೆ ವಿಚಾರಣೆಯನ್ನು ನಿರಾತಂಕವಾಗಿ ಮುಂದುವರಿಸಿದ ಸಿಜೆಐ ಗವಾಯಿ ಅವರ ಶಾಂತತೆ ಮತ್ತು ಸಮಾಧಾನವನ್ನು ಪ್ರಧಾನಿಯವರ ಶ್ಲಾಘಿಸಿದ್ದಾರೆ.
“ಇಂತಹ ಪರಿಸ್ಥಿತಿಯಲ್ಲಿಯೂ ಗವಾಯಿ ತೋರಿದ ಧೈರ್ಯ ಮತ್ತು ಶಾಂತ ಮನೋಭಾವ ಪ್ರಶಂಸನೀಯ. ಇದು ನ್ಯಾಯದ ಮೌಲ್ಯಗಳ ಮೇಲಿನ ಅವರ ಬದ್ಧತೆಯನ್ನು ಮತ್ತು ಸಂವಿಧಾನದ ಚೈತನ್ಯವನ್ನು ಬಲಪಡಿಸುವ ನಿದರ್ಶನವಾಗಿದೆ,” ಎಂದು ಪ್ರಧಾನಿ ತಿಳಿಸಿದ್ದಾರೆ.
ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ 71 ವರ್ಷದ ವಕೀಲ ವಿಚಾರಣೆಯ ವೇಳೆ ಸಿಜೆಐ ಗವಾಯಿ ಅವರತ್ತ ಶೂ ಎಸೆದ ಘಟನೆ ನಡೆದಿದೆ. ಕೋರ್ಟ್ ಸಿಬ್ಬಂದಿ ಅವರನ್ನು ತಕ್ಷಣ ವಶಕ್ಕೆ ಪಡೆದು ಹೊರಗೆ ಕರೆದೊಯ್ದರು. ಹೊರಗೆ ಕರೆದೊಯ್ಯುವಾಗ ಆತ “ಭಾರತ ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ” ಎಂದು ಕೂಗಿದ್ದ ಎನ್ನಲಾಗಿದೆ.
ಘಟನೆ ನಡೆದಾಗ ಮಧ್ಯಪ್ರದೇಶದಲ್ಲಿ ಹಾನಿಗೊಂಡ ವಿಷ್ಣು ವಿಗ್ರಹದ ಪುನಃಸ್ಥಾಪನೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.