ಬಾಂಗ್ಲಾದೇಶದ ಸುಧಾರಣಾ ಕೇಂದ್ರದಲ್ಲಿ ಪಶ್ಚಿಮ ಬಂಗಾಳದ ಕಿವುಡ, ಮೂಕ ಮೀನುಗಾರ ಮೃತ್ಯು; ತನಿಖೆಗ ಕುಟುಂಬ ಆಗ್ರಹ
ಸಾಂದರ್ಭಿಕ ಚಿತ್ರ
ಕೋಲ್ಕತಾ, ನ. 16: ಪಶ್ಚಿಮಬಂಗಾಳದ ಕಿವುಡ ಹಾಗೂ ಮೂಕ ಮೀನುಗಾರರೊಬ್ಬರು ಬಾಂಗ್ಲಾದೇಶದ ಸುಧಾರಣಾ ಕೇಂದ್ರದಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಪಶ್ಚಿಮ ಗಂಗಾಧರಪುರ ಗ್ರಾಮದ ನಿವಾಸಿ ಬಬ್ಲು ದಾಸ್ ಎಂದು ಗುರುತಿಸಲಾಗಿದೆ.
ಬಬ್ಲು ದಾಸ್ ನಮ್ಮ ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ. ಆತ ಕಿವುಡ ಹಾಗೂ ಮೂಕನಾಗಿದ್ದರೂ ಕಷ್ಟಪಟ್ಟು ದುಡಿಯುತ್ತಿದ್ದ ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.
‘‘ಇದು ಸಹಜ ಸಾವಲ್ಲ. ಕಾರಾಗೃಹದಲ್ಲಿ ಆತನಿಗೆ ಚಿತ್ರಹಿಂಸೆ ನೀಡಿ ಹತ್ಯೆಗೈಯಲಾಗಿದೆ ಎಂಬುದು ನಮ್ಮ ಸಂದೇಹ. ಇದು ಯೋಜಿತ ಕೊಲೆ. ಈ ಬಗ್ಗೆ ತನಿಖೆ ನಡೆಸುವಂತೆ ನಾವು ಆಗ್ರಹಿಸುತ್ತೇವೆ. ಅವರಿಗೆ ಯಾವುದೇ ರೀತಿಯ ಸಣ್ಣ ಕಾಯಿಲೇ ಇಲ್ಲದೆ ಇದ್ದರೂ ಸಹಜವಾಗಿ ಸಾಯಲು ಹೇಗೆ ಸಾಧ್ಯ?’’ ಎಂದು ಬಬ್ಲು ದಾಸ್ ಅವರ ಕಿರಿಯ ಸಹೋದರ ಬಸುದೇಬ್ ಪ್ರಶ್ನಿಸಿದ್ದಾರೆ.
ಪಶ್ಚಿಮಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಕಾಕ್ ದ್ವೀಪ್ ಕರಾವಳಿಯ ಬಬ್ಲು ದಾಸ್ ಹಾಗೂ ಇತರ 33 ಮೀನುಗಾರರನ್ನು ಬಾಂಗ್ಲಾದೇಶದ ನೌಕಾ ಪಡೆ ನಾಲ್ಕು ತಿಂಗಳ ಹಿಂದೆ ಬಂಧಿಸಿತ್ತು. ಈ ಮೀನುಗಾರರು ತನ್ನ ಜಲ ಭಾಗದಲ್ಲಿ ಮೀನುಗಾರಿಕೆ ನಡೆಸಿದ್ದಾರೆ ಎಂದು ಅದು ಆರೋಪಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೀನುಗಾರರು ‘ಎಫ್ಬಿ ಮಂಗಳಚಂಡಿ’ ದೋಣಿಯಲ್ಲಿ ಜುಲೈಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಇವರಲ್ಲಿ ಬಬ್ಲು ಸೇರಿದಂತೆ ಕೆಲವರು ಪ್ರಮಾದವಶಾತ್ ಜಲ ಗಡಿಯನ್ನು ದಾಟಿದ್ದರು ಎಂದು ಅವರು ಹೇಳಿದ್ದಾರೆ.
ಈ ಮೀನುಗಾರರನ್ನು ಬಾಂಗ್ಲಾದೇಶದ ನೌಕಾ ಪಡೆ ಬಂಧಿಸಿತ್ತು. ಅನಂತರ ಅವರು ಬಾಂಗ್ಲಾದೇಶದ ಕಾರಾಗೃಹದಲ್ಲಿ ಇರಿಸಿತು ಎಂದು ಬಬ್ಲುವಿನ ಕುಟುಂಬದ ಸದಸ್ಯರು ತಿಳಿಸಿದ್ದಾರೆ.