×
Ad

ದಿಲ್ಲಿ ಸ್ಫೋಟ ಪ್ರಕರಣ: ಎನ್‌ಐಎ ವಿಚಾರಣೆಯ ಬಳಿಕ ಪಶ್ಚಿಮ ಬಂಗಾಳದ ವೈದ್ಯನ ಬಿಡುಗಡೆ

Update: 2025-11-17 17:57 IST

 ರಾಷ್ಟ್ರೀಯ ತನಿಖಾ ಸಂಸ್ಥೆ |Photo Credit : PTI 

ಕೋಲ್ಕತಾ: ದಿಲ್ಲಿ ಕಾರು ಸ್ಫೋಟ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಐದು ಗಂಟೆಗಳ ನಿರಂತರ ವಿಚಾರಣೆಯ ಬಳಿಕ ಫರೀದಾಬಾದ್‌ನ ಅಲ್-ಫಲಾಹ್ ವಿವಿಯ ಮಾಜಿ ಎಂಬಿಬಿಎಸ್ ವಿದ್ಯಾರ್ಥಿ ಡಾ.ಝನಿಶಾರ್ ಆಲಂ ಅವರನ್ನು ಶನಿವಾರ ಬಿಡುಗಡೆಗೊಳಿಸಿದೆ ಎಂದು newindianexpress.com ವರದಿ ಮಾಡಿದೆ.

ತನ್ನ ಸೋದರಿಯ ವಿವಾಹ ಸಮಾರಂಭದ ಸಿದ್ಧತೆಗಳಿಗಾಗಿ ಬುಧವಾರ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ದಲ್ಖೋಲಾದ ಕೋನಾಲ ಗ್ರಾಮಕ್ಕೆ ಆಲಂ ಬಂದಿದ್ದರು. ನ.10ರಂದು ದಿಲ್ಲಿಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಶುಕ್ರವಾರ ಎನ್‌ಐಎ ಅಧಿಕಾರಿಗಳು ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ವಿಚಾರಣೆಗಾಗಿ ಸಿಲಿಗುರಿಗೆ ಕರೆದೊಯ್ದಿದ್ದರು ಎನ್ನಲಾಗಿದೆ. ಎನ್‌ಐಎ ಅಧಿಕಾರಿಗಳು ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳ ಇತರ ತಜ್ಞರು ಅವರನ್ನು ವಿಚಾರಣೆಗೊಳಪಡಿಸಿದ್ದು, ಅವರ ಮೊಬೈಲ್ ಫೋನ್‌ನಲ್ಲಿಯ ಕರೆ ದಾಖಲೆಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ಪರಿಶೀಲಿಸಿದ್ದರು.

ಶನಿವಾರ ಅಪರಾಹ್ನ ಆಲಂ ಅವರನ್ನು ಬಿಡುಗಡೆಗೊಳಿದ ಎನ್‌ಐಎ ಅಗತ್ಯವಿದ್ದಾಗ ದಿಲ್ಲಿಯಲ್ಲಿ ತನಿಖೆಗೆ ಸಂಸ್ಥೆಯೊಂದಿಗೆ ಸಹಕರಿಸುವಂತೆ ಸೂಚಿಸಿದೆ.

ಆಲಂ ತನ್ನ ತಂದೆ ತೌಹಿದ್ ಆಲಂ ಜೊತೆ ಲೂಧಿಯಾನಾದಲ್ಲಿ ವಾಸವಾಗಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಮಾಹಿತಿಯ ಮೇರೆಗೆ ಎನ್‌ಐಎ ಲೂಧಿಯಾನಾದಲ್ಲಿರುವ ತೌಹಿದ್ ಆಲಂ ಅವರನ್ನು ಮೊದಲು ಸಂಪರ್ಕಿಸಿ ಅವರ ಪುತ್ರನ ಕುರಿತು ವಿವರಗಳನ್ನು ಸಂಗ್ರಹಿಸಿತ್ತು. ಆಲಂ ಇದ್ದ ಸ್ಥಳದ ಬಗ್ಗೆ ತಿಳಿದುಕೊಂಡ ಅವರು ದಲ್ಖೋಲಾಕ್ಕೆ ಧಾವಿಸಿದ್ದರು ಎಂದು ಈ ಮೂಲಗಳು ತಿಳಿಸಿವೆ.

ಎನ್‌ಐಎ ತನಿಖಾಧಿಕಾರಿಗಳು ಈಗಾಗಲೇ ದಿಲ್ಲಿ ಸ್ಫೋಟದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಅಲ್ ಫಲಾಹ್ ವಿವಿಯ ನಾಲ್ವರು ವೈದ್ಯರನ್ನು ಬಂಧಿಸಿದ್ದಾರೆ. ಮಹಿಳಾ ವೈದ್ಯೆ ಶಾಹೀನ್ ಸಾಹಿದಿ ಸೇರಿದಂತೆ ನಾಲ್ವರು ವೈದ್ಯರ ನೋಂದಣಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವು ರದ್ದುಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News