ಬ್ರಿಟಿಶ್ ಅಧಿಕಾರಿಗಳು ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ನೀಡಿದ್ದ ಟೀ ಕಪ್ ಅನ್ನು 93 ವರ್ಷಗಳಿಂದ ಸಂರಕ್ಷಿಸಿಟ್ಟಿರುವ ಬಂಗಾಳದ ಪೊಲೀಸ್ ಠಾಣೆ
ನೇತಾಜಿ ಸುಭಾಶ್ ಚಂದ್ರ ಬೋಸ್ | PTI
ಕೋಲ್ಕತ್ತಾ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರದ್ದು ಅಚ್ಚಳಿಯದ ಹೆಸರು. ಬ್ರಿಟಿಶರ ಪಾಲಿಗೆ ಸಿಂಹಸ್ವಪ್ನರಾಗಿದ್ದ ನೇತಾಜಿ ಸುಭಾಶ್ ಚಂದ್ರ ಬೋಸ್, ತಾವು ಬದುಕಿದ್ದಷ್ಟೂ ದಿನ ಬ್ರಿಟಿಶರ ನಿದ್ದೆಗೆಡಿಸಿದವರು. ಹೀಗಿದ್ದೂ, ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ಸೇನಾನಿಯಾಗಿದ್ದ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ಬ್ರಿಟಿಶ್ ಪೊಲೀಸ್ ಅಧಿಕಾರಿಗಳು ಬರೋಬ್ಬರಿ 93 ವರ್ಷಗಳ ಹಿಂದೆ ಟೀ ಆಮಂತ್ರಿಸಿದ್ದರು. ಅವರಿಗೆ ಟೀ ಕೊಡಮಾಡಿದ್ದ ಕಪ್ ಹಾಗೂ ಸಾಸರ್ ಗಳನ್ನು ಈಗಲೂ ಪಶ್ಚಿ ಬಂಗಾಳದ 24 ಪರಗಣಗಳ ಜಿಲ್ಲೆಯಲ್ಲಿ ಸಂರಕ್ಷಿಸಿಡಲಾಗಿದೆ.
ಪ್ರತಿ ವರ್ಷ ಜನವರಿ 23ರಂದು ಈ ಠಾಣೆಯ ಪೊಲೀಸರು ಕೇವಲ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆಯನ್ನು ಮಾತ್ರ ಆಚರಿಸುವುದಿಲ್ಲ; ಬದಲಿಗೆ, 1931ರಲ್ಲಿ ಬ್ರಿಟಿಶರಿಂದ ಬಂಧನಕ್ಕೊಳಗಾಗಿ, ಈ ಠಾಣೆಯಲ್ಲಿ ಕೆಲ ಕಾಲ ಇದ್ದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರನ್ನೂ ಸ್ಮರಿಸುತ್ತಾರೆ.
ಸುಮಾರು 93 ವರ್ಷಗಳ ಹಿಂದೆ, ಅಕ್ಟೋಬರ್ 11, 1931ರ ಸಂಜೆ 5 ಗಂಟೆಯಂದು ಜಗದ್ದಾಲ್ ನಲ್ಲಿನ ಗೋಲ್ ಘರ್ ಬಳಿ ಬಂಗಾಳ ಸೆಣಬು ಕಾರ್ಖಾನೆ ಕಾರ್ಮಿಕರ ಸಂಘಟನೆ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ನೇತಾಜಿಯನ್ನು ಬ್ರಿಟಿಶ್ ಪೊಲೀಸರು ಬಂಧಿಸಿದ್ದರು.
ನಂತರ, ಅವರನ್ನು ನವೋಪಾರ ಪೊಲೀಸ್ ಠಾಣೆಗೆ ಕರೆದೊಯ್ದು, ಅಲ್ಲಿ ಕೆಲಗಂಟೆಗಳ ಕಾಲ ಅವರನ್ನು ವಶದಲ್ಲಿರಿಸಿಕೊಳ್ಳಅಲಾಗಿತ್ತು. ಈ ವಶದ ಸಂದರ್ಭದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ಟೀಯನ್ನು ಆಮಂತ್ರಿಸಲಾಗಿತ್ತು. ಆದರೆ, ಆ ಆಮಂತ್ರಣ ಬ್ರಿಟಿಶ್ ಅಧಿಕಾರಿಯಿಂದ ಬಂದಿದ್ದರಿಂದ, ಅವರು ಆ ಆಮಂತ್ರಣವನ್ನು ನಿರಾಕರಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದ ದಂತಕತೆ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಗೌರವಾರ್ಥ ಅಂದು ಅವರಿಗೆ ಟೀಯನ್ನು ಆಮಂತ್ರಿಸಲಾಗಿದ್ದ ಸೆರಾಮಿಕ್ ಕಪ್ ಹಾಗೂ ಸಾಸರ್ ಅನ್ನು ಇಂದಿಗೂ ಆ ಪೊಲೀಸ್ ಠಾಣೆಯಲ್ಲಿ ಸಂರಕ್ಷಿಸಿಡಲಾಗಿದೆ.
ನೇತಾಜಿಯ ಗೌರವಾರ್ಥವಾಗಿ ಪೊಲೀಸ್ ಠಾಣೆಯಲ್ಲಿ ಸಣ್ಣದೊಂದು ಸ್ಮಾರಕವನ್ನು ಸ್ಥಾಪಿಸಲಾಗಿದೆ. ಈ ಸ್ಮಾರಕದಲ್ಲಿ ನೇತಾಜಿಯ ಭಾವಚಿತ್ರಗಳನ್ನು ಸಂರಕ್ಷಿಸಿಡಲಾಗಿರುವ ಕಪ್ ಹಾಗೂ ಸಾಸರ್ ಪಕ್ಕ ಇಡಲಾಗಿದೆ. ಆ ಪೊಲೀಸ್ ಠಾಣೆಯ ಒಂದು ಕೋಣೆಯನ್ನು ಗ್ರಂಥಾಲಯವನ್ನಾಗಿಯೂ ಪರಿವರ್ತಿಸಲಾಗಿದ್ದು, ಆ ಗ್ರಂಥಾಲಯದಲ್ಲಿ ನೇತಾಜಿಯ ಜೀವನ ಹಾಗೂ ಪರಂಪರೆಯ ಕುರಿತು ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನವೋಪಾರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ನಮ್ಮ ಪ್ರೀತಿಪಾತ್ರ ನೇತಾಜಿ ಹೆಜ್ಜೆಯಿರಿಸಿದ್ದ ಪೊಲೀಸ್ ಠಾಣೆಯಲ್ಲಿ ನಾವು ಕೆಲಸ ಮಾಡುತ್ತಿರುವುದಕ್ಕೆ ನಮ್ಮನ್ನು ನಾವು ಅದೃಷ್ಟವಂತರೆಂದೇ ಭಾವಿಸಿದ್ದೇವೆ. ಅವರು ನಮಗೆ ಸ್ಫೂರ್ತಿಯಾಗಿದ್ದಾರೆ. ಅವರು ಇಲ್ಲಿಗೆ ಭೇಟಿ ನೀಡಿದ್ದ ಸಂಗತಿ ವ್ಯಾಪಕವಾಗಿ ತಿಳಿದಿಲ್ಲ ಹಾಗೂ ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದ ಈ ಅಧ್ಯಾಯವನ್ನು ಎಲ್ಲರೂ ತಿಳಿಯಬೇಕು ಎಂದು ನಾವು ಬಯಸುತ್ತೇವೆ” ಎಂದು ಹೇಳಿದ್ದಾರೆ.