×
Ad

ಮಧ್ಯಪ್ರದೇಶ | ಸ್ನೇಹಿತೆಯ ಮನೆಯಿಂದ 2 ಲಕ್ಷ ರೂ. ಕಳ್ಳತನ ಮಾಡಿದ ಡಿಎಸ್‌ಪಿ: ಸಿಸಿಟಿವಿಯಲ್ಲಿ ಸೆರೆ, ಅಧಿಕಾರಿ ಪರಾರಿ

Update: 2025-10-30 12:33 IST

Photo credit: indiatoday.in

ಭೋಪಾಲ್: ರಾಜ್ಯದ ರಾಜಧಾನಿ ಭೋಪಾಲ್‌ನಲ್ಲಿ ಮಹಿಳಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ)ಯೊಬ್ಬರು ಆಪ್ತ ಸ್ನೇಹಿತೆಯ ಮನೆಯಿಂದ 2 ಲಕ್ಷ ರೂ. ನಗದು ಹಾಗೂ ಮೊಬೈಲ್ ಫೋನ್ ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಡಿಎಸ್‌ಪಿ ಕಲ್ಪನಾ ರಘುವಂಶಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳು ಅವರ ಕಳ್ಳತನದ ದೃಶ್ಯವನ್ನು ಬಯಲಿಗೆಳೆದಿವೆ.

ಈ ಘಟನೆ ಭೋಪಾಲ್‌ನ ಜೆಹಾಂಗೀರಾಬಾದ್ ಪ್ರದೇಶದಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಪ್ರಮೀಳಾ ಎಂಬ ಮಹಿಳೆ ಹಲವು ವರ್ಷಗಳಿಂದ ರಘುವಂಶಿಯ ಆಪ್ತ ಸ್ನೇಹಿತರಾಗಿದ್ದರು. ಕೆಲವು ದಿನಗಳ ಹಿಂದೆ ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿಸಲು 2 ಲಕ್ಷ ರೂ. ಡ್ರಾ ಮಾಡಿಕೊಂಡು ಮನೆಯಲ್ಲಿ ಇಟ್ಟಿದ್ದ ಪ್ರಮೀಳಾ, ನಂತರ ನಗದು ಹಾಗೂ ಮೊಬೈಲ್ ಕಾಣೆಯಾಗಿರುವುದನ್ನು ಗಮನಿಸಿದರು.

ಸಂದೇಹಗೊಂಡ ಪ್ರಮೀಳಾ ಮನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಡಿಎಸ್‌ಪಿ ಕಲ್ಪನಾ ರಘುವಂಶಿ ಬ್ಯಾಗ್ ಹಿಡಿದು ಮನೆಯಿಂದ ಹೊರಬರುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿತ್ತು. ತಕ್ಷಣ ಅವರು ಪೊಲೀಸರನ್ನು ಸಂಪರ್ಕಿಸಿ ಸಿಸಿಟಿವಿ ದೃಶ್ಯಾವಳಿಗಳೊಂದಿಗೆ ಲಿಖಿತ ದೂರು ಸಲ್ಲಿಸಿದರು.

ತನಿಖೆ ಕೈಗೊಂಡ ಜೆಹಾಂಗೀರಾಬಾದ್ ಪೊಲೀಸರು ವೀಡಿಯೊ ಪರಿಶೀಲಿಸಿದಾಗ, ರಘುವಂಶಿ ನಗದು ಬಂಡಲ್‌ಗಳನ್ನು ತೆಗೆದುಕೊಂಡು ಹೋಗಿರುವುದು ದೃಢಪಟ್ಟಿದೆ. ಈ ಆಧಾರದ ಮೇಲೆ ಅವರ ವಿರುದ್ಧ ಕಳ್ಳತನದ ಪ್ರಕರಣ ದಾಖಲಾಗಿದೆ.

ಪ್ರಕರಣ ಹೊರಬಿದ್ದ ತಕ್ಷಣ ರಘುವಂಶಿ ಪರಾರಿಯಾಗಿದ್ದು, ಅವರ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ಪ್ರಮೀಳಾ ಅವರ ಕಾಣೆಯಾದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಆದರೆ ಕಳ್ಳತನ ಮಾಡಿರುವ 2 ಲಕ್ಷ ರೂ. ಪತ್ತೆಯಾಗಿಲ್ಲ.

“ಆರೋಪಿ ಡಿಎಸ್‌ಪಿ ಮತ್ತು ದೂರುದಾರರು ಆಪ್ತ ಸ್ನೇಹಿತರಾಗಿದ್ದರು. ಘಟನೆ ದಿನ ಪ್ರಮೀಳಾ ಮನೆಯಲ್ಲಿ ಇರಲಿಲ್ಲ. ಡಿಎಸ್‌ಪಿ ಮನೆಗೆ ನುಗ್ಗಿ ನಗದು ಹಾಗೂ ಫೋನ್ ಕಳ್ಳತನ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊಬೈಲ್ ವಶಪಡಿಸಿಕೊಂಡಿದ್ದು, ಆರೋಪಿ ಅಧಿಕಾರಿ ಪರಾರಿಯಾಗಿದ್ದಾರೆ” ಎಂದು ಈ ಕುರಿತು ಎಸಿಪಿ ಬಿಟ್ಟು ಶರ್ಮಾ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News