ಬೈಕ್ ಗೆ ಢಿಕ್ಕಿ ಹೊಡೆದು, ವ್ಯಕ್ತಿಯನ್ನು 3 ಕಿ.ಮೀ. ಎಳೆದೊಯ್ದ ಇನ್ನೋವಾ!
ಲಕ್ನೋ: ದಂಪತಿ ಮತ್ತು ಐದು ವರ್ಷದ ಮಗು ಇದ್ದ ಬೈಕ್ ಗೆ ಢಿಕ್ಕಿ ಹೊಡೆದ ಇನ್ನೋವಾ ಕಾರು, ಫೆಂಡರ್ ಮತ್ತು ವ್ಹೀಲ್ ನಡುವೆ ಸಿಕ್ಕಿಹಾಕಿಕೊಂಡ ಬೈಕ್ ಚಾಲಕನನ್ನು ಸುಮಾರು ಮೂರು ಕಿಲೋಮೀಟರ್ ದೂರದ ವೆರೆಗೆ ಎಳೆದೊಯ್ದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ವ್ಯಕ್ತಿ ಮೃತಪಟ್ಟಿದ್ದು, ಪತ್ನಿ ಹಾಗೂ ಮಗುವಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ವೀರೇಂದ್ರ ಕುಮಾರ್ ಎಂಬ ವ್ಯಕ್ತಿ ಪತ್ನಿ ಹಾಗೂ ಮಗುವಿನೊಂದಿಗೆ ರಾಯ್ ಬರೇಲಿಯಿಂದ ದಲ್ಮಾವು ಪಟ್ಟಣಕ್ಕೆ ಬೈಕ್ ನಲ್ಲಿ ಬರುತ್ತಿದ್ದಾಗ, ವೇಗವಾಗಿ ಬಂದ ಇನ್ನೋವಾ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಪತ್ನಿ ಹಾಗೂ ಮಗು ಬೈಕ್ ನಿಂದ ಎಸೆಯಲ್ಪಟ್ಟರೆ, ಢಿಕ್ಕಿ ಹೊಡೆದ ರಭಸಕ್ಕೆ ಬಲಬದಿಯ ಫೆಂಡರ್ ಮತ್ತು ಚಕ್ರದ ನಡುವೆ ವೀರೇಂದ್ರ ಸಿಕ್ಕಿಹಾಕಿಕೊಂಡಿದ್ದರು. ಅಪಘಾತ ನಡೆದರೂ ವಾಹನವನ್ನು ನಿಲ್ಲಿಸದೇ, ಸಿಕ್ಕಿಹಾಕಿಕೊಂಡಿದ್ದ ವೀರೇಂದ್ರ ಅವರನ್ನು ಸುಮಾರು ಮೂರು ಕಿಲೋಮೀಟರ್ ದೂರ ಎಳೆದೊಯ್ದ ಚಾಲಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ವೀರೇಂದ್ರ ಅವರ, ಪತ್ನಿ ರೂಪಲ್ ಹಾಗೂ ಮಗ ಅನುರಾಗ್ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ಪಡೆಯತ್ತಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.