×
Ad

ತೆರಿಗೆದಾರರಿಗೆ ಬಂಪರ್ ಕೊಡುಗೆ: ಕೇಂದ್ರ ಹಣಕಾಸು ಸಚಿವೆ ಸಮರ್ಥನೆ

Update: 2025-02-03 08:48 IST

PC: PTI

ಹೊಸದಿಲ್ಲಿ: ತೆರಿಗೆದಾರರಿಗೆ ಇತಿಹಾಸದಲ್ಲೇ ಅತಿದೊಡ್ಡ ಕೊಡುಗೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಕ್ರಮ ತೆರಿಗೆ ನೆಲೆಯನ್ನು ಮತ್ತಷ್ಟು ಸಂಕುಚಿತಗೊಳಿಸುತ್ತದೆ ಎಂಬ ಟೀಕೆಗಳನ್ನು ತಳ್ಳಿಹಾಕಿದ್ದಾರೆ. ಜಾಗತಿಕ ಅನಿಶ್ಚಿತತೆಗಳ ನಡುವೆ ಪ್ರಬಲ ಮೂಲಭೂತ ಅಂಶಗಳು ದೇಶದ ಆರ್ಥಿಕತೆಗೆ ನೆರವಾಗಲಿವೆ ಎಂದು ಅವರು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರತಿಪಾದಿಸಿದ್ದಾರೆ.

ಆದಾಯ ತೆರಿಗೆದಾರರಿಗೆ ನೀಡಿರುವ ದೊಡ್ಡ ಕೊಡುಗೆ ಗ್ರಾಹಕರ ಬಳಕೆಯನ್ನು ಹೆಚ್ಚಿಸಬಹುದಲ್ಲವೇ, ಮುಖ್ಯ ಪರಿಗಣನೆಯ ಅಂಶ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಇಲ್ಲಿ ಪರಿಗಣಿಸಿರುವ ಪ್ರಧಾನ ಅಂಶವೆಂದರೆ ರಾಷ್ಟ್ರನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸುವುದು" ಎಂದು ಸ್ಪಷ್ಟಪಡಿಸಿದರು. ಇದರಿಂದ ಬಳಕೆ ಹೆಚ್ಚಬಲ್ಲದು ಮತ್ತು ಉಳಿತಾಯವೂ ಹೆಚ್ಚಲಿದೆ ಎಂದು ಹೇಳಿದರು.

ಜಾಗತಿಕ ಅನಿಶ್ಚಿತತೆಗಳ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಭಾರತದ ಪ್ರಗತಿ ಅವಕಾಶಗಳ ಬಗ್ಗೆ ಕೇಳಿದ ಪ್ರಶ್ನೆಗೆ, "ಭಾರತ ವಿಶ್ವದಲ್ಲೇ ಅತಿವೇಗದಲ್ಲಿ ಪ್ರಗತಿ ಸಾಧಿಸುವ ಆರ್ಥಿಕತೆ ಎಂಬ ಸುಳಿವನ್ನು ವಿಶ್ವಬ್ಯಾಂಕ್ ಮತ್ತು ಐಎಂಎಫ್ ಈಗಾಗಲೇ ನೀಡಿವೆ. ಬಾಹ್ಯ ಕಾರಣಗಳ ಎಲ್ಲ ಪ್ರತಿಕೂಲ ಮತ್ತು ಸವಾಲುದಾಯಕ ಅಂಶಗಳ ನಡುವೆಯೂ, ನಾವು ಆಕರ್ಷಕ ಹಾಗೂ ಪ್ರಬಲ ಆರ್ಥಿಕತೆ ಹೊಂದಿದ್ದೇವೆ. ನಮ್ಮ ವಿಸ್ತೃತ ಆರ್ಥಿಕತೆಯ ಮೂಲಭೂತ ಅಂಶಗಳು ಪ್ರಬಲವಾಗಿವೆ. ಆದ್ದರಿಂದ ನಮ್ಮ ಪ್ರಗತಿ ಮುಂದುವರಿಯಲಿದೆ" ಎಂದು ಉತ್ತರಿಸಿದರು.

ಗ್ರಾಮೀಣ ಹಾಗು ನಗರ ಕೇಂದ್ರಗಳಲ್ಲಿ ತೆರಿಗೆ ಪ್ರಯೋಜನ ಪಡೆದ ಫಲಾನುಭವಿಗಳ ವ್ಯಾಪ್ತಿಯಿಂದ ಹೊರಗಿರುವವರಿಗೆ ಯಾವ ಕೊಡುಗೆ ನೀಡಲು ಉದ್ದೇಶಿಸಿದ್ದೀರಿ ಎಂದು ಕೇಳಿದಾಗ, "ಇಂಥವರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ನಂಥ ಯೋಜನೆಗಳಿವೆ. ಇದರ ಸಾಲಮಿತಿಯನ್ನು 3 ರಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಸ್ಟ್ಯಾಂಡ್ಅಪ್ ಇಂಡಿಯಾ ಸಾಲಗಳಿಗಾಗಿ 50 ಕೋಟಿ ರೂ. ನೀಡಲಾಗಿದೆ. ಕೈಗೆಟುಕುವ ದರದ ಮನೆಗೆ ಬ್ಯಾಂಕ್ ಗಳು ರಿಯಾಯ್ತಿ ದರದಲ್ಲಿ ಸಾಲ ನೀಡುತ್ತಿವೆ. ಸ್ಟಾರ್ಟಪ್ ಗಳು 10 ಸಾವಿರ ಕೋಟಿ ಹೆಚ್ಚುವರಿ ನೆರವು ಪಡೆಯಲಿವೆ. ಈ ವರ್ಗಕ್ಕೆ ಕೈಗೆಟುಕುವ ದರದಲ್ಲಿ ಸಾಲಸಿಗುತ್ತಿದೆ. ತಳಮಟ್ಟದಲ್ಲಿ ಸ್ವಸಹಾಯ ಗುಂಪುಗಳೂ ಹೆಚ್ಚಿನ ನೆರವು ಪಡೆಯುತ್ತಿವೆ" ಎಂಬ ವಿವರ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News