×
Ad

ನಿವೃತ್ತ ಎಐಎಸ್ ಅಧಿಕಾರಿಗಳಿಗೆ ನಿಯಮಗಳನ್ನು ಬದಲಿಸಿದ ಕೇಂದ್ರ, ರಾಜ್ಯಗಳ ಅಧಿಕಾರ ಮೊಟಕು: ವರದಿ

Update: 2023-07-21 18:28 IST

ಸಾಂದರ್ಭಿಕ ಚಿತ್ರ | Photo: PTI

ಹೊಸದಿಲ್ಲಿ: ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಯಾವುದೇ ಉಲ್ಲೇಖವನ್ನು ನೆಚ್ಚಿಕೊಳ್ಳದೆ ಭಾರತೀಯ ಆಡಳಿತ ಸೇವೆ (ಐಎಎಸ್),ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಮತ್ತು ಭಾರತೀಯ ಅರಣ್ಯ ಸೇವೆ (ಐಫ್ಒಎಸ್)ಗಳಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿಗಳ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿಯುವ ಅಥವಾ ಹಿಂದೆಗೆದುಕೊಳ್ಳುವ ಅಧಿಕಾರವನ್ನು ಸಂಪೂರ್ಣವಾಗಿ ತನಗೇ ಕೊಟ್ಟುಕೊಂಡಿದೆ ಎಂದು thewire.in ವರದಿ ಮಾಡಿದೆ.

ಈವರೆಗೆ ನಿವೃತ್ತ ಅಧಿಕಾರಿಯೋರ್ವರು ಗಂಭೀರ ದುರ್ವರ್ತನೆಯ ತಪ್ಪಿತಸ್ಥರಾಗಿದ್ದರೆ ಅಥವಾ ಅಪರಾಧಕ್ಕಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದರೆ ರಾಜ್ಯ ಸರಕಾರಗಳ ಉಲ್ಲೇಖಗಳನ್ನು ಆಧರಿಸಿ ಮಾತ್ರ ಕೇಂದ್ರವು ಕ್ರಮವನ್ನು ತೆಗೆದುಕೊಳ್ಳುತ್ತಿತ್ತು.

ಕೇಂದ್ರ ಸರಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಜು.6ರಂದು ಅಖಿಲ ಭಾರತ ಸೇವೆ (ಎಐಎಸ್)ಗಳ (ಸಾವು ಮತ್ತು ನಿವೃತ್ತಿ ಸೌಲಭ್ಯಗಳು) ನಿಯಮಗಳು,1958ಕ್ಕೆ ತಿದ್ದುಪಡಿಗಳ ಅಧಿಸೂಚನೆಯನ್ನು ಪ್ರಕಟಿಸಿದೆ. ತಿದ್ದುಪಡಿಗೊಂಡ ನಿಯಮಗಳ ಪ್ರಕಾರ ‘ಗಂಭೀರ ದುರ್ವರ್ತನೆ’ಯು ಅಧಿಕೃತ ರಹಸ್ಯಗಳ ಕಾಯ್ದೆಯಲ್ಲಿ ಉಲ್ಲೇಖಿಸಲಾದ ಯಾವುದೇ ದಾಖಲೆ ಅಥವಾ ಮಾಹಿತಿಯ ಸಂವಹನ ಅಥವಾ ಬಹಿರಂಗಗೊಳಿಸುವಿಕೆಯನ್ನು ಹಾಗೂ ‘ಗಂಭೀರ ಅಪರಾಧ ’ವು ಈ ಕಾಯ್ದೆಯಡಿ ಯಾವುದೇ ಅಪರಾಧವನ್ನು ಒಳಗೊಂಡಿರುತ್ತವೆ.

ಈ ಮೊದಲು 1958ರ ಕಾಯ್ದೆಯ ನಿಯಮ 3(3) ರಲ್ಲಿ ನಿವೃತ್ತ ಅಧಿಕಾರಿ ಶಿಕ್ಷೆಗೊಳಗಾದ ಬಳಿಕ ಸಂಬಂಧಿತ ರಾಜ್ಯ ಸರಕಾರದ ಉಲ್ಲೇಖದ ಮೇರೆಗೆ ಕೇಂದ್ರ ಸರಕಾರವು ಪಿಂಚಣಿಯನ್ನು ಅಥವಾ ಅದರ ಭಾಗವನ್ನು ತಡೆಹಿಡಿಯಬಹುದು ಅಥವಾ ಹಿಂದೆಗೆದುಕೊಳ್ಳಬಹುದು ಎಂದು ಹೇಳಲಾಗಿತ್ತು. ಇದನ್ನು ಈಗ ‘ಸಂಬಂಧಿತ ರಾಜ್ಯ ಸರಕಾರದ ’ನಂತರ ‘ಅಥವಾ ಇಲ್ಲದಿದ್ದರೆ ’ಪದಗಳನ್ನು ಸೇರಿಸುವ ಮೂಲಕ ತಿದ್ದುಪಡಿ ಮಾಡಲಾಗಿದೆ. ಪಿಂಚಣಿಯನ್ನು ತಡೆಹಿಡಿಯುವುದರಲ್ಲಿ ಅಥವಾ ಹಿಂದೆಗೆದುಕೊಳ್ಳುವಲ್ಲಿ ಕೇಂದ್ರ ಸರಕಾರದ ನಿರ್ಧಾರವು ಅಂತಿಮವಾಗಿರುತ್ತದೆ ಎಂದು ತಿದ್ದುಪಡಿಗೊಂಡಿರುವ ನಿಯಮಗಳಲ್ಲಿ ಒತ್ತಿ ಹೇಳಲಾಗಿದೆ.

ಕೇಂದ್ರ ಸರಕಾರದ ಪ್ರಕಾರ,ನಿವೃತ್ತ ಅಧಿಕಾರಿಗಳು ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ಬಳಿಕವೂ ರಾಜ್ಯ ಸರಕಾರಗಳು ಇಂತಹ ಯಾವುದೇ ಉಲ್ಲೇಖಗಳನ್ನು ಕಳುಹಿಸುತ್ತಿಲ್ಲ ಎನ್ನುವುದು ತಿದ್ದುಪಡಿಗೆ ಕಾರಣವಾಗಿದೆ.

ಯಾವುದೇ ಗುಪ್ತಚರ ಅಥವಾ ಭದ್ರತೆ ಸಂಬಂಧಿತ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಬದಲಾಗಿರುವ ನಿಯಮವು,‘ನಿವೃತ್ತಿಯ ಬಳಿಕ ಇಂತಹ ಸಂಸ್ಥೆಯ ಮುಖ್ಯಸ್ಥರ ಪೂರ್ವಾನುಮತಿಯಿಲ್ಲದೆ ಯಾವುದೇ ಪ್ರಕಟನೆಯನ್ನು ಮಾಡುವುದನ್ನು ಕಾನೂನು ಬಾಹಿರವೆಂದು ಪರಿಗಣಿಸಲಾಗುತ್ತದೆ. ಅಂದರೆ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಗೊಳಿಸುವ ಅಭಿಪ್ರಾಯಗಳನ್ನು ಮಾಧ್ಯಮಗಳಲ್ಲಿ ವ್ಯಕ್ತಗೊಳಿಸುವುದು ಅಥವಾ ಬರೆಯುವುದು ಅಥವಾ ಇಂತಹ ಮಾಹಿತಿಗಳನ್ನೊಳಗೊಂಡ ಪುಸ್ತಕಗಳನ್ನು ಬರೆಯುವುದು ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕಾರಣವಾಗುತ್ತದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಲ್ಲಿನ ಮೂಲವು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News