×
Ad

ಸಿಮ್ ಪರಿಶೀಲನೆಗೆ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರಕಾರ; ಇಲ್ಲಿದೆ ಮಾಹಿತಿ…

Update: 2023-08-19 19:18 IST

ಹೊಸದಿಲ್ಲಿ: ಕೇಂದ್ರ ಸರ್ಕಾರವು ಸಿಮ್ ಪರಿಶೀಲನೆಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು, ಬೃಹತ್ ಸಂಪರ್ಕಗಳನ್ನು ಒದಗಿಸುವ ಅವಕಾಶವನ್ನು ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ ಸಿಮ್ ಕಾರ್ಡ್ ಗಳನ್ನು ಮಾರಾಟ ಮಾಡುವ ವರ್ತಕರ ಗುರುತು ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಸರ್ಕಾರವು ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಈ ಹೊಸ ನಿಯಮಗಳು ಜಾರಿಗೆ ಬಂದಿವೆ ಎಂದು ndtv.com ವರದಿ ಮಾಡಿದೆ.

ಪತ್ರಿಕಾಗೋಷ್ಠಿಯಲ್ಲಿ ಹೊಸ ನಿಯಮಗಳನ್ನು ಪ್ರಕಟಿಸಿದ ಕೇಂದ್ರ ಸಂಪರ್ಕ, ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಅಕ್ರಮ ಮಾರ್ಗಗಳ ಮೂಲಕ ಸಂಪರ್ಕ ಪಡೆಯಲಾಗಿದ್ದ 52 ಲಕ್ಷಕ್ಕೂ ಹೆಚ್ಚು ಸಂಪರ್ಕಗಳನ್ನು ಸರ್ಕಾರ ನಿಷ್ಕ್ರಿಯಗೊಳಿಸಿದೆ. ಈ ಅಕ್ರಮ ಸಂಪರ್ಕಗಳನ್ನು ಒದಗಿಸಿರುವ 67,000ಕ್ಕೂ ಹೆಚ್ಚು ವರ್ತಕರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಈ ಪೈಕಿ ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿದ್ದವರ ವಿರುದ್ಧ 300 ಪ್ರಕರಣಗಳನ್ನು ದಾಖಲಿಸಲಾಗಿದೆ. ಮೇ ತಿಂಗಳಲ್ಲಿ ವಿಶ್ವ ದೂರಸಂಪರ್ಕ ದಿನಾಚರಣೆಯ ಪ್ರಯುಕ್ತ ಮೂರು ಗ್ರಾಹಕ ಸ್ನೇಹಿ ಸುಧಾರಣೆ (ಕೇಂದ್ರೀಯ ಸಾಧನ ಗುರುತು ದಾಖಲಾತಿ, ನಿಮ್ಮ ಮೊಬೈಲ್ ಬಗ್ಗೆ ಅರಿಯಿರಿ ಹಾಗೂ ಎಎಸ್‍ಟಿಆರ್)ಗಳನ್ನು ಬಿಡುಗಡೆಗೊಳಿಸಲಾಗಿತ್ತು. ಈಗ, ಅವುಗಳೊಂದಿಗೆ ಮತ್ತೆರಡು ಸುಧಾರಣೆಗಳೊಂದಿಗೆ ಬರಲು ನಾವು ನಿರ್ಧರಿಸಿದ್ದೇವೆ. ಈ ಸುಧಾರಣೆಗಳು ಸಂಪೂರ್ಣವಾಗಿ ಬಳಕೆದಾರರ ರಕ್ಷಣೆ ಹಾಗೂ ಸೈಬರ್ ಅಪರಾಧ ಪ್ರಕರಣಗಳನ್ನು ತಗ್ಗಿಸುವುದರತ್ತ ಗಮನ ಹರಿಸಿವೆ” ಎಂದು ಹೇಳಿದ್ದಾರೆ.

ಸಿಮ್ ಪರಿಶೀಲನೆಯ ಪ್ರಮುಖ ಹಂತಗಳು ಹೀಗಿವೆ:

ವರ್ತಕರಿಗೆ ಕಡ್ಡಾಯ ಪರಿಶೀಲನೆ

ಹೊಸ ನಿಯಮಗಳ ಪ್ರಕಾರ, ಎಲ್ಲ ಸಿಮ್ ವರ್ತಕರು ಕಡ್ಡಾಯ ನೋಂದಣಿಯೊಂದಿಗೆ ಪೊಲೀಸ್ ಹಾಗೂ ಬಯೋಮೆಟ್ರಿಕ್ ಪರಿಶೀಲನೆಯನ್ನು ಪೂರ್ಣಗೊಳಿಸಬೇಕಿದೆ. ಈ ಸಿಮ್ ಕಾರ್ಡ್ ವರ್ತಕರ ಪರಿಶೀಲನೆಯನ್ನು ದೂರಸಂಪರ್ಕ ನಿರ್ವಾಹಕರು ನಿರ್ವಹಿಸಲಿದ್ದು, ಈ ನಿಯಮವನ್ನು ಉಲ್ಲಂಘಿಸಿದಲ್ಲಿ ರೂ. 10 ಲಕ್ಷದವರೆಗೂ ದಂಡ ತೆರಬೇಕಾಗುತ್ತದೆ.

12 ತಿಂಗಳ ಪರಿಶೀಲನಾ ಅವಧಿ

ಚಾಲ್ತಿಯಲ್ಲಿರುವ ವರ್ತಕರಿಗೆ 12 ತಿಂಗಳ ಅವಧಿಯ ನೋಂದಣಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಕಾರ ಪ್ರಕಟಿಸಿದೆ. ಈ ಪರಿಶೀಲನೆಯು ಗುರುತು ಪತ್ತೆಗೆ ನೆರವು, ತಡೆ ಪಟ್ಟಿ ತಯಾರಿಸುವುದು ಹಾಗೂ ವ್ಯವಸ್ಥೆಯಿಂದ ವಂಚಕ ವರ್ತಕರನ್ನು ತೆಗೆದು ಹಾಕುವ ಉದ್ದೇಶವನ್ನು ಹೊಂದಿದೆ.

ವಾಸ ಸ್ಥಳ ದತ್ತಾಂಶ ಸಂಗ್ರಹ

ಕೆವೈಸಿ ಸುಧಾರಣೆಗಳ ಅಡಿ, ಹೊಸ ಸಿಮ್ ಖರೀದಿಸುತ್ತಿದ್ದರೆ ಅಥವಾ ಚಾಲ್ತಿಯಲ್ಲಿರುವ ಸಂಖ್ಯೆಗೆ ಹೊಸ ಸಿಮ್ ಗಾಗಿ ಅರ್ಜಿ ಸಲ್ಲಿಸಿದರೆ, ಗ್ರಾಹಕರ ವಾಸ ಸ್ಥಳ ವಿವರಗಳನ್ನು ಅವರ ಆಧಾರ್ ಕಾರ್ಡ್ ಮೇಲೆ ಮುದ್ರಿತವಾಗಿರುವ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸೆರೆ ಹಿಡಿಯಲಾಗುತ್ತದೆ.

ಬೃಹತ್ ಪ್ರಮಾಣದ ಸಿಮ್ ಕಾರ್ಡ್ ವಿತರಣೆ ಇಲ್ಲ

ಬೃಹತ್ ಪ್ರಮಾಣದ ಸಿಮ್ ಕಾರ್ಡ್ ಗಳನ್ನು ವಿತರಿಸುವ ಅವಕಾಶವನ್ನು ದೂರಸಂಪರ್ಕ ಇಲಾಖೆಯು ಸ್ಥಗಿತಗೊಳಿಸಿದ್ದು, ಅದರ ಬದಲಿಗೆ ಉದ್ಯಮ ಸಂಪರ್ಕ ಪರಿಕಲ್ಪನೆಯನ್ನು ಪರಿಚಯಿಸುತ್ತಿದೆ. ಉದ್ಯಮಗಳ ಕೆವೈಸಿ ಪರಿಶೀಲನೆಯೊಂದಿಗೆ, ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯುವ ವ್ಯಕ್ತಿಯ ಕೆವೈಸಿ ಪರಿಶೀಲನೆಯನ್ನೂ ನಡೆಸಲಾಗುತ್ತದೆ. ಸಾಮಾನ್ಯ ವ್ಯಕ್ತಿಗಳು ಈಗಲೂ ಒಂದು ಗುರುತಿನ ಚೀಟಿ ಆಧಾರದಲ್ಲಿ ಒಂಬತ್ತು ಸಿಮ್ ಕಾರ್ಡ್ ಗಳನ್ನು ಪಡೆಯಬಹುದಾಗಿದೆ.

ಸಿಮ್ ಕಾರ್ಡ್ ಸಂಪರ್ಕ ಕಡಿತ

ಮೊಬೈಲ್ ಸಂಪರ್ಕ ಕಡಿತಗೊಂಡ 90 ದಿನಗಳ ನಂತರ ನೂತನ ಗ್ರಾಹಕರಿಗೆ ಮೊಬೈಲ್ ಸಂಖ್ಯೆಯನ್ನು ಒದಗಿಸಲಾಗುತ್ತದೆ. ಒಂದು ವೇಳೆ ಸಿಮ್ ಕಾರ್ಡ್ ಅನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರೆ, ಒಳ ಬರುವ ಮತ್ತು ಹೊರ ಹೋಗುವ ಕಿರು ಸಂದೇಶ ಸೇವೆಗಳ ಮೇಲಿನ 24 ಗಂಟೆಗಳ ಕಾಲ ನಿರ್ಬಂಧದೊಂದಿಗೆ ಚಂದಾದಾರನು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ.

ಈ ವರ್ಷಾರಂಭದಲ್ಲಿ ಪ್ರಕಟಿಸಲಾಗಿದ್ದ ಸುಧಾರಣಾ ಕಂತೆಯಲ್ಲಿ ಸರ್ಕಾರವು ಕಳೆದು ಹೋದ ಮೊಬೈಲ್ ಸಾಧನಗಳು ಹಾಗೂ ಅವುಗಳ ನಿರ್ಬಂಧಕ್ಕಾಗಿ ವರದಿ ಮಾಡಲು ‘ಸಂಚಾರ್ ಸಾರಥಿ’ ಎಂಬ ಜಾಲತಾಣವನ್ನು ತೆರೆದಿತ್ತು. ಇದರೊಂದಿಗೆ ಅಕ್ರಮ ಮೊಬೈಲ್ ಸಂಪರ್ಕಗಳನ್ನು ಪತ್ತೆ ಹಚ್ಚಲು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಾಂಶವಾದ ಎಎಸ್‍ಟಿಆರ್ ಅನ್ನು ಪರಿಚಯಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News