ʼಮೊಮ್ಮಗʼ ಬೇಕೆಂದು ಬಯಕೆ ವ್ಯಕ್ತಪಡಿಸಿ ವ್ಯಾಪಕ ಟೀಕೆಗೆ ಗುರಿಯಾದ ತೆಲುಗು ಸ್ಟಾರ್ ಚಿರಂಜೀವಿ
ನಟ ಚಿರಂಜೀವಿ (PTI)
ಹೊಸದಿಲ್ಲಿ : ತೆಲುಗು ಸ್ಟಾರ್ ಚಿರಂಜೀವಿ ಹೆಣ್ಣು ಮಕ್ಕಳ ಕುರಿತ ಹೇಳಿಕೆಗಾಗಿ ವಿವಾದಕ್ಕೀಡಾಗಿದ್ದಾರೆ. ‘ಬ್ರಹ್ಮ ಆನಂದಂ’ ಚಿತ್ರದ ಫ್ರಿ-ಇವೆಂಟ್ ಕಾರ್ಯಕ್ರಮದಲ್ಲಿ ತನಗೆ ಮೊಮ್ಮಗ ಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ ಚಿರಂಜೀವಿ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ʼಬ್ರಹ್ಮ ಆನಂದಂ’ ಚಿತ್ರದ ಫ್ರಿ-ಇವೆಂಟ್ ಕಾರ್ಯಕ್ರಮದಲ್ಲಿ ಮಾತನಾಡಿದ ತೆಲುಗು ಸ್ಟಾರ್ ಚಿರಂಜೀವಿ, ಮನೆಯಲ್ಲಿ ಇರುವಾಗ ಮೊಮ್ಮಕ್ಕಳು ಸುತ್ತುವರೆದಿರುವಂತೆ ಭಾಸವಾಗುವುದಿಲ್ಲ, ಸುತ್ತಲೂ ಹೆಂಗಸರು ಸುತ್ತುವರೆದಿರುವ ಕಾರಣ ನನಗೆ ಲೇಡೀಸ್ ಹಾಸ್ಟೆಲ್ ವಾರ್ಡನ್ ಇದ್ದಂತೆ ಅನಿಸಿದೆ. ಹೀಗಾಗಿ ನಮ್ಮ ವಂಶ ಪರಂಪರೆ ಮುಂದುವರೆಯಲು ರಾಮ್ ಚರಣ್‌ಗೆ ಗಂಡು ಮಗು ಜನಿಸಲಿ ಎಂದು ನಾನು ಹಾರೈಸುತ್ತೇನೆ. ಆದರೆ, ಸೊಸೆ ಉಪಾಸನ ಮತ್ತೊಮ್ಮೆ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೋ ಎಂಬ ಭಯ ನನಗಿದೆ ಎಂದು ಹೇಳಿದ್ದಾರೆ.
ಟೀಕೆಗೆ ಗುರಿಯಾದ ಚಿರಂಜೀವಿ ಹೇಳಿಕೆ:
ಚಿರಂಜೀವಿ ʼಮೊಮ್ಮಗʼ ಬೇಕೆಂದು ಬಯಕೆ ವ್ಯಕ್ತಪಡಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ತೆಲುಗು ಸ್ಟಾರ್ ಚಿರಂಜೀವಿ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ʼಚಿರಂಜೀವಿ ಹೇಳಿರುವ ಮಾತು ತುಂಬಾ ದುಃಖಕರವಾಗಿದೆ. ಹೆಣ್ಣು ಮಗುವಾದರೆ ಭಯವೇಕೆ? ಅವರು ಗಂಡಿನಂತೆಯೇ ತನ್ನ ಪರಂಪರೆಯನ್ನು ಉತ್ತಮವಾಗಿ ಮುನ್ನಡೆಸುತ್ತಾರೆ. ಎಲ್ಲರೂ ಅವರ ಮಾತಿಗೆ ವ್ಯಂಗ್ಯವಾಡುತ್ತಾರೆ. ಇಂತಹ ಹೇಳಿಕಗೆಳು ನಮ್ಮ ಹದಗೆಟ್ಟ ಚಿಂತನೆಯನ್ನು ಬಿಂಬಿಸುತ್ತದೆʼ ಎಂದು ವ್ಯಕ್ತಿಯೋರ್ವರು ಎಕ್ಸ್ ನಲ್ಲಿ ಟೀಕೆ ಮಾಡಿದ್ದಾರೆ.
ಈ ಕುರಿತು ಇನ್ನೋರ್ವ ಎಕ್ಸ್ ಬಳಕೆದಾರರು ಪ್ರತಿಕ್ರಿಯಿಸಿ, ʼಪ್ರೀತಿಯ ಚಿರಂಜೀವಿ ಅವರೇ, ಓರ್ವ ನಟನಾಗಿ ನಿಮ್ಮ ಬಗ್ಗೆ ನನಗೆ ಗೌರವವಿದೆ. ಆದರೆ ನಿಮ್ಮ ಇತ್ತೀಚಿನ ಹೇಳಿಕೆಯ ಬಗ್ಗೆ ಕೆಲವು ಸ್ಪಷ್ಟೀಕರಣವನ್ನು ನಾನು ಕೇಳಿತ್ತಿದ್ದೇನೆ, ಇದು ಸ್ತ್ರೀ ದ್ವೇಷದ ಹೇಳಿಕೆಯಾಗಿ ಕಂಡು ಬರುತ್ತಿದೆ. ಪರಂಪರೆಯನ್ನು ಗಂಡು ಮಗು ಅಥವಾ ಪುರುಷರು ಮಾತ್ರ ಮುಂದಕ್ಕೆ ಕೊಂಡೊಯ್ಯಬಹುದು ಎಂದು ಸೂಚಿಸುತ್ತದೆ. ನೀವು ನಿಜವಾಗಿಯೂ ಇದನ್ನೇ ಹೇಳುತ್ತಿದ್ದೀರಾ? ಅಥವಾ ತಮಾಷೆಯಾಗಿ ಹೇಳಿದ್ದೀರಾʼ ಎಂದು ಪ್ರಶ್ನಿಸಿದ್ದಾರೆ,
ಚಿರಂಜೀವಿಗೆ ಶ್ರೀಜಾ ಕೊನಿಡೇಲಾ ಮತ್ತು ಸುಶ್ಮಿತಾ ಕೊನಿಡೇಲಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶ್ರೀಜಾ ಅವರಿಗೆ ನವಿಷ್ಕಾ ಮತ್ತು ನಿವ್ರತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಶ್ಮಿತಾ ಅವರಿಗೆ ಸಮರ ಮತ್ತು ಸಂಹಿತಾ ಎಂಬ ಹೆಣ್ಣು ಮಕ್ಕಳಿದ್ದಾರೆ. ಅವರ ಮಗ ರಾಮ್ ಚರಣ್ ಮತ್ತು ಸೊಸೆ ಉಪಾಸನಾಗೆ ಒಂದು ಹೆಣ್ಣು ಮಗುವಿದೆ. ಇದರಿಂದ ಚಿರಂಜೀವಿ ನನಗೆ ಮೊಮ್ಮಗ ಬೇಕು ಎಂದು ಬಯಕೆಯನ್ನು ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.