ಅಮೇಥಿಯಲ್ಲಿ ಇನ್ನೂ ಅಭ್ಯರ್ಥಿ ಘೋಷಿಸದ ಕಾಂಗ್ರೆಸ್: ರಾರಾಜಿಸುತ್ತಿರುವ ರಾಬರ್ಟ್‌ ವಾದ್ರಾ ಪೋಸ್ಟರ್‌

Update: 2024-04-24 08:40 GMT

ರಾಬರ್ಟ್ ವಾದ್ರಾ | PC : @ndtvfeed

ಅಮೇಥಿ: ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ, ಕ್ಷೇತ್ರದಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರು ಕೂಡಾ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್‌ ನ ಸ್ಥಳೀಯ ಕಚೇರಿಯ ಹೊರಗಡೆ ವಾದ್ರಾಗೆ ಟಿಕೆಟ್‌ ನೀಡುವಂತೆ ಆಗ್ರಹಿಸಿ ಪೋಸ್ಟರ್‌ ಹಾಕಲಾಗಿದೆ.

ನಾಮಪತ್ರ ಸಲ್ಲಿಕೆಗೆ ಗಡುವು ಮುಗಿಯುತ್ತಿರುವ ಕಾರಣ, ಈ ಇತ್ತೀಚಿನ ಬೆಳವಣಿಗೆಯು ಅವರ ಸಂಭಾವ್ಯ ಉಮೇದುವಾರಿಕೆಯ ಬಗ್ಗೆ ಊಹಾಪೋಹವನ್ನು ಹುಟ್ಟುಹಾಕಿದೆ.

ಅಮೇಥಿಯಿಂದ ರಾಹುಲ್‌ ಗಾಂಧಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ, ರಾಬರ್ಟ್‌ ವಾದ್ರಾ ಅವರೂ ಅಮೇಥಿಯಿಂದ ಸ್ಪರ್ಧೀಸುವ ಬಗ್ಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವ್ಯಂಗ್ಯವಾಡಿದ್ದ ಇರಾನಿ, ʼಭಾವನಿಗೆ (ರಾಬರ್ಟ್‌ ವಾದ್ರಗೆ) ಕ್ಷೇತ್ರದ ಮೇಲೆ ಕಣ್ಣಿದ್ದರೆ, ಭಾಮೈದ (ರಾಹುಲ್‌ ಗಾಂಧಿ) ಏನು ಮಾಡಬಹುದುʼ ಎಂದು ಗುರುವಾರ ಹೇಳಿದ್ದರು.

ಇದಕ್ಕೂ ಮುನ್ನ, 'ಚಿಂತಿಸಬೇಕಾದ ಒಂದು ವಿಷಯವಿದೆ, ರಾಹುಲ್ ಗಾಂಧಿಗೆ ತಿಳಿದಿದೆಯೋ ಇಲ್ಲವೋ, ಅವರ ಭಾವನಿಗೆ ಜಗದೀಶ್‌ಪುರ ತಿಳಿದಿದೆ. ಜಗದೀಶ್‌ಪುರದ ಜನರು ಈಗಲೇ ಎಚ್ಚೆತ್ತುಕೊಳ್ಳಬೇಕು. ಅವರ ಭಾವನಿಗೆ ಜಗದೀಶ್‌ಪುರವನ್ನು ತಿಳಿದಿದ್ದರೆ, ಪ್ರತಿ ಹಳ್ಳಿ, ಪ್ರತಿ ಮನೆ, ಪ್ರತಿಯೊಬ್ಬ ವ್ಯಕ್ತಿಯೂ ಈಗ ತಮ್ಮ ಆಸ್ತಿ ಪತ್ರಗಳನ್ನು ಮರೆಮಾಡಬೇಕಾಗಿದೆʼ ಎಂದು ಇರಾನಿ ಕುಟುಕಿದ್ದರು.

2019 ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಗೆಲುವು ಸಾಧಿಸಿದ್ದರು.

ಕಾಂಗ್ರೆಸ್ ಅಧಿಕೃತವಾಗಿ ಅಮೇಥಿಗೆ ತನ್ನ ಅಭ್ಯರ್ಥಿಯನ್ನು ಘೋಷಿಸದಿದ್ದರೂ, ರಾಬರ್ಟ್ ವಾದ್ರಾ ಅವರನ್ನು ಒಳಗೊಂಡ ಪೋಸ್ಟರ್‌ಗಳು ಪಟ್ಟಣದಲ್ಲಿ ರಾರಾಜಿಸುತ್ತಿರುವುದು ತೀವ್ರ ಚರ್ಚೆಯಾಗಿದೆ.

ಇದಕ್ಕೂ ಮುನ್ನ ರಾಬರ್ಟ್ ವಾದ್ರಾ ಅವರು ಚುನಾವಣೆ ಸ್ಪರ್ಧಿಸಲು ಆಸಕ್ತಿ ಇರುವ ಬಗ್ಗೆ ಸುಳಿವು ನೀಡಿದ್ದರು. ತಾನು ಸಂಸತ್ತಿನ ಸದಸ್ಯರಾಗಲು ಯೋಚಿಸಿದರೆ, ಅಮೇಥಿಯ ಜನರು ತಮ್ಮ ಕ್ಷೇತ್ರವನ್ನು ಪ್ರತಿನಿಧಿಸಲು ಬಯಸುತ್ತಿದ್ದಾರೆ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News