×
Ad

ಜಿಎಸ್‌ಟಿ ಸುಧಾರಣೆಯಿಂದ ದಿನನಿತ್ಯದ ಅಗತ್ಯ ವಸ್ತುಗಳು, ಔಷಧಿಗಳು ಅಗ್ಗ : ಪ್ರಧಾನಿ ಮೋದಿ

“ʼಜಿಎಸ್‌ಟಿ ಉಳಿತಾಯ ಉತ್ಸವʼ ಆರಂಭ”

Update: 2025-09-21 17:26 IST

 ಪ್ರಧಾನಿ ನರೇಂದ್ರ ಮೋದಿ (Photo: PTI)

ಹೊಸದಿಲ್ಲಿ,ಸೆ.21: ನೂತನ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ)ಯ ಜಾರಿಯು ಭಾರತವು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ಇಟ್ಟಿರುವ ಮೊದಲ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ವದೇಶಿ ಸಾಮಾಗ್ರಿಗಳ ಉತ್ಪಾದನೆ ಹಾಗೂ ಬಳಕೆಯನ್ನು ಉತ್ತೇಜಿಸುವಂತೆ ಅವರು ದೇಶದ ಜನತೆಗೆ ಕರೆ ನೀಡಿದರು.

ಕೇಂದ್ರ ಸರಕಾರವು ಎರಡು ಸ್ಲ್ಯಾಬ್‌ಗಳ ನೂತನ ಜಿಎಸ್‌ಟಿ ತೆರಿಗೆ ವ್ಯವಸ್ಥೆಯನ್ನು ರವಿವಾರ ಮಧ್ಯರಾತ್ರಿಯಿಂದ ಜಾರಿಗೊಳಿಸುವುದಕ್ಕೆ ತಾಸುಗಳ ಮುನ್ನ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ, ನೂತನ ಸುಂಕ ಸುಧಾರಣೆಗಳನ್ನು ಉಳಿತಾಯ (ಬಚತ್)ಗಳ ಹಬ್ಬವೆಂದು ಬಣ್ಣಿಸಿದರು.

ನಾಲ್ಕು ಸ್ಲ್ಯಾಬ್‌ಗಳ ಜಿಎಸ್‌ಟಿ ವ್ಯವಸ್ಥೆಯನ್ನು ಎರಡು ಸ್ಲ್ಯಾಬ್‌ಗಳಿಗೆ ಇಳಿಸಿರುವುದು, ಜಿಎಸ್‌ಟಿ ನಿಯಮಗಳ ಅನುಸರಣೆಯನ್ನು ಸರಳೀಕರಿಸಿರುವುದು ಹಾಗೂ ಅವಶ್ಯಕ ವಸ್ತುಗಳ ದರಗಳನ್ನು ಇಳಿಸುವ ಮೂಲಕ ಭಾರತೀಯರು ದೈನಂದಿನ ಬದುಕಿನಲ್ಲಿ ವಿದೇಶಿ ಉತ್ಪನ್ನಗಳನ್ನು ದೂರವಿಡುವ ಅಗತ್ಯವನ್ನು ಒತ್ತಿ ಹೇಳಿದರು. ಆ ಮೂಲಕ ದೇಶದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ)ಗಳನ್ನು ಉತ್ತೇಜಿಸಬೇಕಾಗಿದೆಯೆಂದು ಅವರು ಹೇಳಿದ್ದಾರೆ.

ಈ ಹಿಂದೆ ಭಾರತವು ಸಮೃದ್ಧ ದೇಶವಾಗಿತ್ತು. ತನ್ನ ವಿಶ್ವ ದರ್ಜೆಯ ಸಾಮಾಗ್ರಿಗಳನ್ನು ಅದು ಉತ್ಪಾದಿಸುತ್ತಿತ್ತು ಹಾಗೂ ಮಾರಾಟ ಮಾಡುವ ಸಾಮರ್ಥ್ಯವನ್ನು ಹೊಂದಿತ್ತು.

ಭಾಷಣದ ಆರಂಭದಲ್ಲಿ ದೇಶದ ಜನತೆಗೆ ನವರಾತ್ರಿಯ ಶುಭಾಶಯಗಳನ್ನು ಕೋರಿದ ಪ್ರಧಾನಿ ಜಿಎಸ್‌ಟಿ ‘ಒಂದು ರಾಷ್ಟ್ರ ಒಂದು ದೇಶ’ದ ಕನಸನ್ನು ನನಸಾಗಿಸಿದೆ ಎಂದರು.

ದೇಶದ ವ್ಯವಹಾರಗಳು ವಿವಿಧ ತೆರಿಗೆಗಳ ಜಾಲದಲ್ಲಿ ಸಿಲುಕಿಕೊಂಡಿದ್ದು, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸರಕುಗಳು ಚಲಿಸಲು ಅಸಂಖ್ಯಾತ ಅಡೆತಡೆಗಳಿದ್ದವು. ವಿವಿಧ ತೆರಿಗೆ ಕಾನೂನುಗಳಿದ್ದವು. ಆದರೆ 2017ರಲ್ಲಿ ಜಾರಿಗೆ ಬಂದ ಜಿಎಸ್‌ಟಿ ಮೂಲಕ ಅವೆಲ್ಲವೂ ನಿವಾರಣೆಯಾಗಿದೆ ಎಂದು ಪ್ರಧಾನಿ ಹೇಳಿದರು.

ಜಿಎಸ್‌ಟಿ ಸುಧಾರಣೆಗಳ ಜೊತೆಗೆ ವ್ಯಕ್ತಿಗಳಿಗೆ 12 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿಯನ್ನು ಘೋಷಿಸಿರುವುದು ಮಧ್ಯಮ ಹಾಗೂ ನವ ಮಧ್ಯಮ ವರ್ಗಕ್ಕೆ ಡಬಲ್ ಧಮಾಕ ಎಂದು ಪ್ರಧಾನಿ ಮೋದಿ ವಿವರಿಸಿದರು. ಇದರಿಂದಾಗಿ ಸಾಮಾಗ್ರಿಗಳು ಅಗ್ಗವಾಗಲಿದ್ದು, 2.5 ಲಕ್ಷ ಕೋಟಿಗೂ ಅಧಿಕ ಕುಟುಂಬಗಳಿಗೆ ಉಳಿತಾಯವಾಗಲಿದೆ. ‘‘ನವರಾತ್ರಿಯ ಮೊದಲನೇ ದಿನದಂದು ದೇಶವು ಆತ್ಮನಿರ್ಭರತೆಯೆಡೆಗೆ ಮೊದಲ ಹೆಜ್ಜೆಯನ್ನಿಡುತ್ತಿದೆ ಎಂದು ಹೇಳಿದ ಪ್ರಧಾನಿ ಭಾರತೀಯ ಸಾಮಾಗ್ರಿಗಳ ಉತ್ಪಾದನೆಯನ್ನು ಉತ್ತೇಜಿಸುವ ನೀತಿಯನ್ನು ಅಳವಡಿಸಿಕೊಳ್ಳುವಂತೆ ರಾಜ್ಯಗಳಿಗೆ ಕರೆ ನೀಡಿದರು. ಈ ಮೊದಲು ಶೇ.12ರಷ್ಟು ಜಿಎಸ್‌ಟಿ ತೆರಿಗೆಗೆ ಒಳಪಟ್ಟಿದ್ದ ದೈನಂದಿನ ಬಳಕೆಯ ಹಲವಾರು ಸಾಮಾಗ್ರಿಗಳು ಈಗ ಶೇ.5ರ ಸ್ಲ್ಯಾಬ್ ನಡಿಗೆ ಬಂದಿರುವುದನ್ನು ಪ್ರಧಾನಿ ವಿವರಿಸಿದರು.

‘‘ಗರ್ವ್ ಸೆ ಕಹೋ ಯೇ ಸ್ವದೇಶಿ ಹೈ ಔರ್ ಮೈನೆ ಸ್ವದೇಶಿ ಖರೀದ್ತಾ ಔರ್ ಬೇಚ್ ತಾ ಹೂ (ನೀವು ಸ್ವದೇಶಿಯೆಂದು ಹೆಮ್ಮೆಯಿಂದ ಹೇಳಿಕೊಳ್ಳಿ. ಸ್ವದೇಶಿ ಸರಕುಗಳನ್ನು ಖರೀದಿಸಿ ಹಾಗೂ ಮಾರಾಟ ಮಾಡಿ)’’

ಮೋದಿ ಭಾಷಣದ ಮುಖ್ಯಾಂಶಗಳು

► ವಿಕಸಿತ ಭಾರತದ ಗುರಿಯನ್ನು ಸ್ವಾವಲಂಬನೆಯ ಮೂಲಕ ತಲುಪಬೇಕೆಂಬುದನ್ನು ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಬೇಕಿದೆ.

► ಕಳೆದ 11 ವರ್ಷಗಳಿಂದ 25 ಕೋಟಿ ಜನರನ್ನು ಬಡತನದ ರೇಖೆಯಿಂದ ಮೇಲೆತ್ತಲಾಗಿದೆ.

► ತೆರಿಗೆ ವಿನಾಯಿತಿಗಳ ಮೂಲಕ ನವ ಮಧ್ಯಮ ವರ್ಗ ಹಾಗೂ ಮಧ್ಯಮ ವರ್ಗಕ್ಕೆ 2.5 ಲಕ್ಷ ಕೋಟಿ ರೂ. ಉಳಿತಾಯವಾಗಿದೆ.

► ನಾಗರಿಕ ದೇವೋಭವ (ಪೌರರು ದೇವರಿಗೆ ಸಮಾನ) ಕೇಂದ್ರ ಸರಕಾರದ ಸಾರ್ವಜನಿಕ ನೀತಿಯಾಗಿದೆ ಎಂದರು.

► ಭಾರತೀಯರು ದೈನಂದಿನ ಬದುಕಿನಲ್ಲಿ ವಿದೇಶಿ ಉತ್ಪನ್ನಗಳನ್ನು ದೂರವಿರಿಸಬೇಕಾಗಿದೆ.

► ಕಳೆದ ಕೆಲವು ದಶಕಗಳಿಂದ ವಿದೇಶಿ ಉತ್ಪನ್ನಗಳು ನಮ್ಮ ದೈನಂದಿನ ಬಳಕೆಯಲ್ಲಿ ನುಸುಳಿಕೊಂಡಿವೆ. ಇವುಗಳನ್ನು ನಾವು ನಮ್ಮದೇ ಉತ್ಪನ್ನಗಳಿಂದ ತೆರವುಗೊಳಿಸುವ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News