ತಿರುಪತಿಯ ಶ್ರೀ ವೆಂಕಟೇಶ್ವರ ವಿವಿಯಲ್ಲಿ ದಲಿತ ಪ್ರಾಧ್ಯಾಪಕರ ಕುರ್ಚಿಯನ್ನು ತೆಗೆಸಿದ ಡೀನ್; ಜಾತಿ ತಾರತಮ್ಯದ ಆರೋಪ
Photo credit: thenewsminute.com
ತಿರುಪತಿ: ಇಲ್ಲಿನ ಶ್ರೀ ವೆಂಕಟೇಶ್ವರ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಡೈರಿ ತಂತ್ರಜ್ಞಾನ ವಿಭಾಗದಲ್ಲಿ ದಲಿತ ಪ್ರಾಧ್ಯಾಪಕ ವಿ ರವಿವರ್ಮ ಅವರು ಕಾಲುಗಳನ್ನು ಮಡಚಿ ನೆಲದ ಮೇಲೆ ಕುಳಿತಿರುವ ಫೋಟೋ ಜೂನ್ 20 ರಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ತಿರುಪತಿಯ ಎಸ್‌ವಿ ವಿಶ್ವವಿದ್ಯಾಲಯದಲ್ಲಿ ಸುಮಾರು ಎರಡು ದಶಕಗಳಿಂದ ಕೆಲಸ ಮಾಡುತ್ತಿದ್ದ ಪ್ರೊಫೆಸರ್ ವರ್ಮಾ ಅವರ ಕುರ್ಚಿಯನ್ನು ಅಸೋಸಿಯೇಟ್ ಡೀನ್ ರವೀಂದ್ರ ರೆಡ್ಡಿ ಅವರು ತಮ್ಮ ಕಚೇರಿಯಿಂದ ತೆಗೆಸಿದ್ದರಿಂದ ಅವರು ಪ್ರತಿಭಟನೆ ಮಾಡಲು ನೆಲದ ಮೇಲೆ ಕುಳಿತಿದ್ದರು.
ಜೂನ್ 12 ರಂದು ಪ್ರೊಫೆಸರ್ ವರ್ಮಾ ಅವರ ಕ್ಯಾಬಿನ್ ನಲ್ಲಿ ಕುರ್ಚಿಯನ್ನು ಹಾಕಲಾಗಿತ್ತು. ಒಂದು ವಾರದ ನಂತರ, ಕುರ್ಚಿಯು ಬೇರೆ ವಿಭಾಗಕ್ಕೆ ಸೇರಿದೆ ಎಂದು ಅಸೋಸಿಯೇಟ್ ಡೀನ್ ರವೀಂದ್ರ ರೆಡ್ಡಿ ಅದನ್ನು ತಮ್ಮ ಕಚೇರಿಯಿಂದ ತೆಗೆಸಿದರು. ಪ್ರೊಫೆಸರ್ ವರ್ಮಾ ಜೂನ್ 19 ರಂದು ರಜೆಯ ಮೇಲೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು The News Minute ವರದಿ ಮಾಡಿದೆ.
ಘಟನೆಯ ನಂತರ ವಿವಿ ಸಿಬ್ಬಂದಿಯ ಸಭೆ ನಡೆಸಲಾಗಿತ್ತು. ಈ ವೇಳೆ ಡೈರಿ ತಂತ್ರಜ್ಞಾನದ ವಿಭಾಗದ ಮುಖ್ಯಸ್ಥೆ ವಿಜಯ ಗೀತಾ ಅವರು, ವರ್ಮಾ ಅವರ ಪಕ್ಕದಲ್ಲಿ ಕುಳಿತು ಘಟನೆ ಹೇಗೆ ನಡೆಯಿತು ಎಂಬುದನ್ನು ಚರ್ಚಿಸುತ್ತಿರುವುದನ್ನು ವಿಡಿಯೋದಲ್ಲಿದೆ.
"ಜೂನ್ 20 ರ ಬೆಳಿಗ್ಗೆ ನಾನು ಕಚೇರಿಗೆ ಬಂದಾಗ, ಪ್ರೊಫೆಸರ್ ವರ್ಮಾ ಅವರ ಕಚೇರಿಯಲ್ಲಿ ಕುರ್ಚಿ ಇಲ್ಲ ಎಂಬುದು ನನ್ನ ಗಮನಕ್ಕೆ ಬಂತು. ವರ್ಮಾ ಅವರಿಗೆ ಕುಳಿತುಕೊಳ್ಳಲು ಕುರ್ಚಿ ಬೇಕಾಗಿರುವುದರಿಂದ ಅವರ ಕ್ಯಾಬಿನ್‌ನಲ್ಲಿ ಕುರ್ಚಿಯನ್ನು ಇರಿಸಲಾಗಿದೆಯೆ ಎಂದು ನಾನು ಪರಿಶೀಲಿಸಿದೆ", ಎಂದು ಗೀತಾ ಅವರು ಹೇಳಿದರು. ಸಾಮಾನ್ಯವಾಗಿ ಪ್ರಾಧ್ಯಾಪಕರಿಗೆ ನೀಡಲಾಗುವ ಕುರ್ಚಿಗಿಂತ ಈ ಕುರ್ಚಿ ಭಿನ್ನವಾಗಿತ್ತು ಎಂದು ಅವರು ಉಲ್ಲೇಖಿಸಿದರು.
ಈ ಘಟನೆಯು ಕಚೇರಿ ಸಾಮಗ್ರಿಗಳನ್ನು ಸರಿಯಾಗಿ ನಿರ್ವಹಿಸದ ಸರಳ ಪ್ರಕರಣವೇನು ಅಲ್ಲ.ಇದು ಜಾತಿ ಆಧಾರಿತ ತಾರತಮ್ಯದ ಸ್ಪಷ್ಟ ಪ್ರಕರಣವಾಗಿದೆ ಎಂದು ವಿಶ್ವವಿದ್ಯಾಲಯದ ಮೂಲಗಳು the news minuteಗೆ ತಿಳಿಸಿವೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪ್ರೊಫೆಸರ್ ವರ್ಮಾ, ರವೀಂದ್ರ ರೆಡ್ಡಿಯವರಂತೆಯೇ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರೂ, ವರ್ಮಾ ಖಾಯಂ ಸಹೋದ್ಯೋಗಿಗಳಿಗಿಂತ ಕಡಿಮೆ ಸಂಬಳವನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ.
"ಒಬ್ಬ ವ್ಯಕ್ತಿ, ವಿಶೇಷವಾಗಿ ಪ್ರಾಧ್ಯಾಪಕರಾಗಿರುವವರು, ಯಾರಾದರೂ ತಮ್ಮ ಕಚೇರಿಗೆ ನುಗ್ಗಿ ಅವರ ಕುರ್ಚಿಯನ್ನು ತೆಗೆದುಕೊಂಡು ಹೋಗುವಂತೆ ಮಾಡುವುದು ಅತ್ಯಂತ ಅವಮಾನಕರ. ಕನಿಷ್ಠ ಪಕ್ಷ, ಪ್ರಾಧ್ಯಾಪಕರಿಗೆ ಮೀಸಲಾದ ತಿರುಗುವ ಕುರ್ಚಿಯನ್ನು ಬೇರೆ ಕುರ್ಚಿಯೊಂದಿಗೆ ಬದಲಾಯಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ," ಎಂದು ವಿಜಯ ಗೀತಾ ಅವರು ಸಿಬ್ಬಂದಿ ಸಭೆಯಲ್ಲಿ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಜಾತಿವಾದಕ್ಕೆ ಸ್ಪಷ್ಟ ಉದಾಹರಣೆಯಾದ ಈ ಘಟನೆಗೆ ಪ್ರತಿಕ್ರಿಯೆಯಾಗಿ, ವರ್ಮಾ ತಮ್ಮ ಕಚೇರಿಯ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಈ ಕುರಿತು ಪ್ರತಿಕ್ರಿಯಿಸುವಂತೆ ಅವರನ್ನು ಸಂಪರ್ಕಿಸಿದಾಗ, ಮಾಧ್ಯಮಗಳೊಂದಿಗೆ ಮಾತನಾಡಲು ವಿಶ್ವವಿದ್ಯಾಲಯದ ಆಡಳಿತದಿಂದ ತಮಗೆ ಅನುಮತಿ ನೀಡಿಲ್ಲ ಎಂದು ಅವರು ನಿರಾಕರಿಸಿದರು.
ಈ ಕುರಿತು ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವರಾದ ಲತಾ ಅವರನ್ನು ಸಂಪರ್ಕಿಸಿದಾಗ, "ನಾವು ಪ್ರಾಧ್ಯಾಪಕರು ಮಾಧ್ಯಮಗಳೊಂದಿಗೆ ಮಾತನಾಡಲು ನೇರವಾಗಿ ಅನುಮತಿಸುವುದಿಲ್ಲ. ಅದಕ್ಕೆ ಅವರಿಗೆ ಡೀನ್ ರ ಅನುಮತಿ ಅಥವಾ ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಅನುಮತಿ ಬೇಕಾಗುತ್ತದೆ" ಎಂದು ಅವರು ಪ್ರತಿಕ್ರಿಯಿಸಿದರು.
ರವೀಂದ್ರ ರೆಡ್ಡಿ ಕುರಿತು ದೂರು ನೀಡುತ್ತಿರುವುದು ಇದೇ ಮೊದಲಲ್ಲ ಎಂದು ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು The news minute ಗೆ ಹೇಳಿದರು. ವಿಶ್ವವಿದ್ಯಾಲಯದ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಈ ಹಿಂದೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
"ಈಗ ಉಪಕುಲಪತಿಗಳು ಸಮಸ್ಯೆಯನ್ನು ಪರಿಹರಿಸಿದ್ದಾರೆ. ಈ ವಿಷಯವನ್ನು ತನಿಖೆ ಮಾಡಲು ಸಮಿತಿಯನ್ನು ನೇಮಿಸಲಾಗಿದೆ. ಈ ಸಮಸ್ಯೆಯನ್ನು ಒಂದೆರಡು ದಿನಗಳಲ್ಲಿ ಪರಿಹರಿಸಲಾಗುವುದು. ಡಾ. ವರ್ಮಾ ಅವರ ಕುರ್ಚಿಯನ್ನು ಕಿತ್ತುಹಾಕಿರುವುದು ಕೇವಲ ತಪ್ಪು ಮಾಹಿತಿ", ಎಂದು ರಿಜಿಸ್ಟ್ರಾರ್ ಲತಾ ಹೇಳಿದರು.
ಈ ಲೇಖನವನ್ನು ಬರೆಯುವ ಸಮಯದಲ್ಲಿ, ರವೀಂದ್ರ ರೆಡ್ಡಿ ಅವರು ವರ್ಮಾ ಅವರ ಕುರ್ಚಿಯನ್ನು ಬದಲಾಯಿಸಿರಲಿಲ್ಲ. ವಿಭಾಗದ ಮುಖ್ಯಸ್ಥರು ವರ್ಮಾ ರಿಗೆ ಹೊಸ ಕುರ್ಚಿಯನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.