ಬುಲೆಟ್ ಬೈಕ್ ನಲ್ಲಿ ಸವಾರಿ ಮಾಡಿದ್ದಕ್ಕೆ ದಲಿತ ವಿದ್ಯಾರ್ಥಿಯ ಕೈ ಕತ್ತರಿಸಿದ ಸವರ್ಣೀಯರು : ಆರೋಪ
Photo credit | newindianexpress.com
ಚೆನ್ನೈ: ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಮೇಳಪಿಡವೂರು ಗ್ರಾಮದಲ್ಲಿ ದಲಿತ ವಿದ್ಯಾರ್ಥಿಯೋರ್ವ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಸವಾರಿ ಮಾಡಿದ್ದಕ್ಕೆ ಸವರ್ಣೀಯ ಸಮುದಾಯಕ್ಕೆ ಸೇರಿದ ಮೂವರು ದುಷ್ಕರ್ಮಿಗಳು ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಆತನ ಕೈಗಳನ್ನು ಕತ್ತರಿಸಿರುವ ಆರೋಪ ಕೇಳಿ ಬಂದಿದೆ.
ಅಯ್ಯಸಾಮಿ ಸಂತ್ರಸ್ತ ವಿದ್ಯಾರ್ಥಿ. ಈತ ಸರ್ಕಾರಿ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದಾನೆ. ಹಲ್ಲೆಯಿಂದ ಐಯ್ಯಸಾಮಿಯ ಎರಡೂ ಕೈಗಳಿಗೆ ಗಂಭೀರ ಗಾಯಗಳಾಗಿದ್ದು, ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿ ಆರ್ ವಿನೋತ್ ಕುಮಾರ್ (21), ಎ ಅಥೀಶ್ವರನ್ (22), ಎಂ ವಲ್ಲರಸು (21)ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಸಂತ್ರಸ್ತ ಯುವಕನ ಕುಟುಂಬಸ್ಥರು ಹೇಳಿದ್ದೇನು?
ಈ ಕುರಿತು ಆರ್ ಐಯ್ಯಸಾಮಿಯ ಸಂಬಂಧಿ ಮುನಿಯಸಾಮಿ ಪ್ರತಿಕ್ರಿಯಿಸಿ, ʼಸವರ್ಣೀಯ ಯುವಕರು ಮಾತ್ರ ಅತ್ಯಾಧುನಿಕ ಬೈಕ್ ಗಳನ್ನು ರೈಡ್ ಮಾಡಬೇಕು, ದಲಿತರು ಅಂತಹ ಬೈಕ್ ಗಳನ್ನು ರೈಡ್ ಮಾಡಬಾರದು ಎಂದು ಜಾತಿ ನಿಂದನೆ ಮಾಡಿ ಐಯ್ಯಸಾಮಿಯ ಮೇಲೆ ವಿನೋತ್ ಕುಮಾರ್, ಎ ಅಥೀಶ್ವರನ್ ಮತ್ತು ಎಂ ವಲ್ಲರಸು ಹಲ್ಲೆ ನಡೆಸಿದ್ದಾರೆ. ಐಯ್ಯಸಾಮಿ ಸ್ಥಳದಿಂದ ಓಡಿಹೋಗಿ ಮನೆಗೆ ಸೇರಿಕೊಳ್ಳದಿದ್ದರೆ ಅವರು ಅವನನ್ನು ಕೊಲೆ ಮಾಡುತ್ತಿದ್ದರು. ಆತನನ್ನು ನಾವು ಆಸ್ಪತ್ರೆಗೆ ದಾಖಲಿಸಿದ ಬಳಿಕವೂ ಸವರ್ಣೀಯರು ಆತನ ಮನೆಗೆ ನುಗ್ಗಿದ್ದಾರೆ. ಗ್ರಾಮದಲ್ಲಿ ಹಿಂದಿನಿಂದಲೂ ಜಾತಿ ತಾರತಮ್ಯ ನಡೆಯುತ್ತಿದ್ದು, ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಯ್ಯಸಾಮಿಯ ತಂದೆ ಭೂಮಿನಾಥನ್ ಈ ಕುರಿತು ಪ್ರತಿಕ್ರಿಯಿಸಿ, ಈ ಪ್ರದೇಶದಲ್ಲಿ ನನ್ನ ಮಗ ಬುಲೆಟ್ ಬೈಕ್ ರೈಡ್ ಮಾಡುವುದು ಸವರ್ಣೀಯ ಹಿಂದೂಗಳಿಗೆ ಸಮಾಧಾನವಿರಲಿಲ್ಲ. ಈ ಹಿಂದೆಯೂ ಅವರು ಬೈಕ್ ಗೆ ಹಾನಿ ಮಾಡಿದ್ದರು ಎಂದು ಹೇಳಿದ್ದಾರೆ.
ಪೊಲೀಸರ ಪ್ರತಿಕ್ರಿಯೆ:
ʼಬುಧವಾರ ಸಂಜೆ ಅಯ್ಯಸಾಮಿ ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕ್ ನಲ್ಲಿ ಮನೆಗೆ ವಾಪಾಸ್ಸಾಗುವಾಗ ಅದೇ ಗ್ರಾಮದ ಆರ್ ವಿನೋತ್ ಕುಮಾರ್, ಎ ಅಥೀಶ್ವರನ್ ಮತ್ತು ಎಂ ವಲ್ಲರಸು ಎಂಬವರು ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದಾರೆ. ‘ಬುಲೆಟ್’ ವಿಚಾರವೇ ದಾಳಿಗೆ ಪ್ರಾಥಮಿಕ ಕಾರಣವಲ್ಲ. ಆರೋಪಿಗಳಲ್ಲಿಓರ್ವನಾದ ಅಥೀಶ್ವರನನ್ನು ಅಯ್ಯಸಾಮಿ ಅಪಹಾಸ್ಯ ಮಾಡಿದ್ದಾನೆ. ಇದರಿಂದ ಅವರ ನಡುವೆ ಈ ಮೊದಲು ಕೂಡ ಜಗಳವಾಗಿತ್ತು. ಆದರೆ, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಆರೋಪಿಗಳಾದ ವಿನೋತ್ ಕುಮಾರ್, ಅಥೀಶ್ವರನ್ ಮತ್ತು ವಲ್ಲರಸು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 296 (1), 126 (2), 118 (1), 351 (3) ಮತ್ತು ಎಸ್ಸಿ, ಎಸ್ಟಿ ಕಾಯ್ದೆಯ 3(1)(r)(s) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈಗಾಗಲೇ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆʼ ಎಂದು ಹೇಳಿದ್ದಾರೆ.