×
Ad

ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನವಾಗಿಲ್ಲ, ಆತ ಮೃತಪಟ್ಟಿಲ್ಲ: ಧೃಡಪಡಿಸಿದ ಗುಪ್ತಚರ ಮೂಲಗಳು

Update: 2023-12-18 20:19 IST

Photo : Indiatoday

ಹೊಸದಿಲ್ಲಿ: ಪಾಕಿಸ್ತಾನದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮತ್ತು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಊಹಾಪೋಹಗಳ ನಡುವೆ, ವಿಶ್ವಾಸಾರ್ಹ ಗುಪ್ತಚರ ಮೂಲಗಳು ಡಿಸೆಂಬರ್ 17 ರಂದು ಸಾಮಾಜಿಕ ಮಾಧ್ಯಮದಲ್ಲಿ ಹಬ್ಬಿದ ವದಂತಿಗಳನ್ನು ತಳ್ಳಿಹಾಕಿವೆ ಎಂದು indiatoday ವರದಿ ಮಾಡಿದೆ.

ಪಾಕಿಸ್ತಾನಿ ಯೂಟ್ಯೂಬರ್‌ ತಡರಾತ್ರಿ ಹಂಚಿಕೊಂಡ ದಾವೂದ್ ಇಬ್ರಾಹಿಂ ಕುರಿತ ಆಧಾರರಹಿತ ವದಂತಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಊಹಾಪೋಹದ ಸುದ್ದಿಯನ್ನು ನಂಬಿ, ದಾವೂದ್ ಇಬ್ರಾಹಿಂಗೆ ವಿಷಪ್ರಾಶನದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಹಬ್ಬಿತ್ತು.

ಪಾಕಿಸ್ತಾನದ ಕೆಲವು ಭಾಗದಲ್ಲಿ ಅಂತರ್ಜಾಲ ಸೇವೆ ಸ್ಥಗಿತವನ್ನೂ ದಾವೂದ್ ಇಬ್ರಾಹಿಂಗೆ ತಳುಕು ಹಾಕಿ ಯೂಟ್ಯೂಬರ್ ಸುದ್ದಿ ಹಂಚಿಕೊಂಡಿದ್ದರು. ಆದಾಗ್ಯೂ, ಅಧಿಕೃತ ಮೂಲಗಳು ಈ ಸುದ್ದಿಯನ್ನು ನಿರಾಕರಿಸಿವೆ.

ಜಾಗತಿಕ ಇಂಟರ್ನೆಟ್ ಸ್ವಾತಂತ್ರ್ಯವನ್ನು ಮೇಲ್ವಿಚಾರಣೆ ಮಾಡುವ ನೆಟ್‌ಬ್ಲಾಕ್ಸ್, ಭಾನುವಾರ ಸಂಜೆ ಸುಮಾರು ಏಳು ಗಂಟೆಗಳ ಕಾಲ ಪಾಕಿಸ್ತಾನದ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಗಮನಾರ್ಹ ನಿರ್ಬಂಧಗಳನ್ನು ಸೂಚಿಸುವ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದೇ ಸಂದರ್ಭದಲ್ಲಿ ರಾಜಕೀಯ ಪಕ್ಷ ಪಾಕಿಸ್ತಾನ್-ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನ ವರ್ಚುವಲ್ ಸಭೆಯೂ ನಡೆಯುತ್ತಿತ್ತು. ಘಟನೆಯನ್ನು ಉದ್ದೇಶಿಸಿ ನೆಟ್‌ಬ್ಲಾಕ್ಸ್, "ಈ ಘಟನೆಯು ವಿರೋಧ ಪಕ್ಷದ ನಾಯಕ ಇಮ್ರಾನ್ ಖಾನ್ ಮತ್ತು ಅವರ ಪಕ್ಷ ಪಿಟಿಐ ಅನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಇಂಟರ್ನೆಟ್ ನಿರ್ಭಂಧದ ಭಾಗವಾಗಿತ್ತು” ಎಂದಿದೆ.

ದಾವೂದ್ ಇಬ್ರಾಹಿಂ ಮತ್ತು ಸಹಚರರ ನಡುವೆ ಸೋರಿಕೆಯಾದ ಕರೆಗಳು:

ಅಂತರ್ ರಾಷ್ಟ್ರೀಯ ನಿರ್ಬಂಧಗಳ ಹೊರತಾಗಿಯೂ, ದಾವೂದ್ ಇಬ್ರಾಹಿಂ ಮತ್ತು ಅವನ ಕುಟುಂಬವು ಹಲವಾರು ದಶಕಗಳಿಂದ ಪಾಕಿಸ್ತಾನದಲ್ಲಿ ಉತ್ತಮ ಆತಿಥ್ಯವನ್ನು ಅನುಭವಿಸುತ್ತಿದೆ ಎನ್ನಲಾಗಿದೆ. 'ಡಿ ಕಂಪನಿ' ನಾಯಕ ದಾವೂದ್ ಮತ್ತು ಅವನ ಸಹವರ್ತಿ ಫಾರೂಕ್ ನದ್ದು ಎನ್ನಲಾದ ಟೆಲಿಫೋನ್ ಸಂಭಾಷಣೆಯೊಂದು, ದಾವೂದ್ ನ ಶ್ರೀಮಂತ ಜೀವನಶೈಲಿಯನ್ನು ಹೊರಹಾಕಿದೆ.

ಟೆಲಿಫೋನ್ ಕರೆಯೊಂದರಲ್ಲಿ ದಾವೂದ್ ಇಬ್ರಾಹಿಂ ತನ್ನ ಸಹವರ್ತಿ ಫಾರೂಕ್‌ಗೆ ಜಿದ್ದಾದಲ್ಲಿನ ಅಂಗಡಿಯಿಂದ ದುಬಾರಿ ಲೂಯಿ ವಿಟಾನ್ (ಎಲ್‌ವಿ) ಶೂಗಳನ್ನು ಖರೀದಿಸಲು ನಿರ್ದೇಶಿಸುತ್ತಾನೆ. ಇಬ್ರಾಹಿಂ, 'ನನ್ನ ಕಾಲಿನ ಗಾತ್ರ 42, ಅದನ್ನು ಸಂಖ್ಯೆ 9 ಎಂದು ಪರಿಗಣಿಸಿ' ಎಂದು ನಿಖರವಾಗಿ ಹೇಳಿರುವುದು ಆಡಿಯೋದಲ್ಲಿದೆ.

ಜೊತೆಗೆ ದಾವೂದು ಯುಕೆ ಮತ್ತು ಇಯು ಗಾತ್ರದ ವ್ಯತ್ಯಾಸಗಳನ್ನು ವಿವರಿಸುತ್ತಾನೆ. ಶುಕ್ರವಾರದ ಪ್ರಾರ್ಥನೆಯ ನಂತರ ಮೆಕ್ಕಾಗೆ ಹೊರಟು ಭಾನುವಾರ ಪಾಕಿಸ್ತಾನಕ್ಕೆ ಹಿಂದಿರುಗುವ ತನ್ನ ಯೋಜನೆಯನ್ನು ಫಾರೂಕ್, ದಾವೂದ್ ಗೆ ತಿಳಿಸುತ್ತಾನೆ. ಆಗ ದಾವೂದ್ ಇಬ್ರಾಹಿಂ ಪವಿತ್ರ ಝಮ್ ಝಮ್ ನೀರನ್ನು ತರುವಂತೆ ಸೂಚಿಸಿರುವುದು ಆಡಿಯೋ ಸಂಭಾಷಣೆಯಲ್ಲಿ ದಾಖಲಾಗಿದೆ.

ಅವನ ಮೊದಲ ಪತ್ನಿ ಮೈಜಾಬಿನ್ ಮತ್ತು ಇಬ್ರಾಹಿಂನ ಸಹಚರರಲ್ಲಿ ಒಬ್ಬನನ್ನು ಒಳಗೊಂಡಿರುವ ಮತ್ತೊಂದು ದಿನಾಂಕವಿಲ್ಲದ ಕರೆಯು ಪಾಕಿಸ್ತಾದ ಪ್ರವಾಸ ಯೋಜನೆಯೊಂದರ ಬಗ್ಗೆ ಬೆಳಕು ಚೆಲ್ಲಿದೆ. ಈ ಪ್ರವಾಸ ಯೋಜನೆಯಲ್ಲಿರುವ ʼಪರಿಚಿತʼರ ಮೇಕಪ್ ವೆಚ್ಚ 2 ಲಕ್ಷ ರೂ ಎಂದಾಗ, ಮೇಕಪ್‌ಗೆ ತಗಲುವ ವೆಚ್ಚವನ್ನು ನೋಡಿಕೊಳ್ಳಲಾಗುವುದು ಎಂದು ಸಹಚರನಿಂದ ಆಕೆಗೆ ಭರವಸೆ ನೀಡಿರುವುದು ದಾಖಲಾಗಿದೆ. ಅಲ್ಲದೇ, 1.40 ಲಕ್ಷ ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಮ್ (AED) ಮೌಲ್ಯದ ಮತ್ತೊಂದು ಎಲ್ವಿ ಬ್ಯಾಗ್ ಮತ್ತು 10 ಲಕ್ಷ ಮೌಲ್ಯದ ಶಾಲುಗಳನ್ನು ಖರೀದಿಸಲಿದ್ದೇನೆ ಎಂದು ಸಹಚರನಿಗೆ ಹೇಳುವುದೂ ದಾಖಲಾಗಿದೆ.

ಬಹಿರಂಗಗೊಂಡಿರುವ ಆಡಿಯೋ ಸಂಭಾಷಣೆಯು ದೇಶದಿಂದ ಪಲಾಯನಗೈದ ಪಾತಕಿಗಳ ಐಷಾರಾಮಿ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ. ಭಾರತೀಯ ಕಾನೂನು ಜಾರಿ ಸಂಸ್ಥೆಗಳಿಂದ ತಪ್ಪಿಸಿಕೊಂಡು, ಜಾಗತಿಕ ನಿರ್ಬಂಧಗಳಿಂದ ತಪ್ಪಿಸಿಕೊಳ್ಳುತ್ತಿರುವ 67 ವರ್ಷದ ದಾವೂದ್ ಇಬ್ರಾಹಿಂ ಅಂತರ್ ರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ, ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರ, ರಿಯಲ್ ಎಸ್ಟೇಟ್, ಹಣ ವರ್ಗಾವಣೆ ಮತ್ತು ಭಯೋತ್ಪಾದನೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News