×
Ad

ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ : ನ್ಯಾಯಮೂರ್ತಿ ಉಜ್ಜಲ್ ಭುಯಾನ್

ಮುಸ್ಲಿಂ ವಿದ್ಯಾರ್ಥಿನಿಗೆ ಮನೆ ನಿರಾಕರಣೆ, ದಲಿತ ಮಹಿಳೆ ತಯಾರಿಸಿದ ಶಾಲಾ ಊಟ ಮಾಡುವುದಕ್ಕೆ ವಿರೋಧ ಘಟನೆ ಉಲ್ಲೇಖಿಸಿದ ನ್ಯಾಯಮೂರ್ತಿ

Update: 2026-02-24 10:57 IST

Photo|  Credit: DH Photo

ಹೊಸದಿಲ್ಲಿ: ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಘನತೆಯ ಭರವಸೆ ನೀಡುತ್ತದೆ. ಆದರೆ ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಹೇಳಿದ್ದಾರೆ.

ಸಾಮಾಜಿಕ ಪೂರ್ವಾಗ್ರಹಗಳಿಂದ ನಮಗೆ ನಿಜವಾದ ಮುಕ್ತಿ ಸಿಕ್ಕಿದೆಯೇ? ಈ ಪ್ರಶ್ನೆಯನ್ನು ಎತ್ತಿದ ನ್ಯಾಯಮೂರ್ತಿ ಉಜ್ಜಲ್ ಭುಯಾನ್, 75 ವರ್ಷಗಳ ಗಣರಾಜ್ಯದ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಅಡಗಿರುವ 'ಆಳವಾದ ಬಿರುಕುಗಳನ್ನು' ಬಿಚ್ಚಿಟ್ಟಿದ್ದಾರೆ.

ತೆಲಂಗಾಣ ನ್ಯಾಯಾಧೀಶರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನ್ಯಾಯಾಧೀಶರನ್ನುದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಭುಯಾನ್, ತಮ್ಮ ಭಾಷಣದಲ್ಲಿ   ಸಮಾಜದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ತಾರತಮ್ಯದ ಎರಡು ಪ್ರಮುಖ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ. ದಕ್ಷಿಣ ದಿಲ್ಲಿಯಂತಹ ಸುಶಿಕ್ಷಿತ ಪ್ರದೇಶದಲ್ಲಿ ಹಾಸ್ಟೆಲ್ ನಡೆಸುತ್ತಿದ್ದ ಮಹಿಳೆಯೊಬ್ಬರು, ನ್ಯಾಯಮೂರ್ತಿಗಳ ಮಗಳ ಗೆಳತಿಗೆ ಕೇವಲ ಆಕೆಯ ಮುಸ್ಲಿಂ ಉಪನಾಮದ ಕಾರಣಕ್ಕಾಗಿ ವಸತಿಯನ್ನು ನಿರಾಕರಿಸಿದರು. ಇದು ನಗರ ಪ್ರದೇಶಗಳಲ್ಲಿಯೂ ಕೋಮು ಪೂರ್ವಾಗ್ರಹ ಎಷ್ಟು ಆಳವಾಗಿದೆ ಎಂಬುದನ್ನು ತೋರಿಸುತ್ತದೆ ಎಂಬುದನ್ನು ಜಸ್ಟಿಸ್ ಭುಯಾನ್ ಬೊಟ್ಟು ಮಾಡಿದರು.

"ನನ್ನ ಮಗಳ ಗೆಳತಿಯೊಬ್ಬಳು ನೋಯ್ಡಾದ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಪಿಎಚ್‌ಡಿ ಮಾಡುತ್ತಿದ್ದಾಳೆ. ಅವಳು ವಸತಿ ಹುಡುಕುತ್ತಿದ್ದಳು. ದಕ್ಷಿಣ ದಿಲ್ಲಿಯಲ್ಲಿ ಹಾಸ್ಟೆಲ್ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು ಅವಳು ಸಂಪರ್ಕಿಸಿದಳು. ಆ ಮಹಿಳೆ ಆಕೆಯ ಹೆಸರನ್ನು ಕೇಳಿದರು. ಅವಳು ತನ್ನ ಹೆಸರನ್ನು ಹೇಳಿದಾಗ, ಅದು ಸ್ವಲ್ಪ ಅಸ್ಪಷ್ಟವಾಗಿತ್ತು, ಹಾಗಾಗಿ ಆ ಮಹಿಳೆ ಆಕೆಯ ಉಪನಾಮವನ್ನು ಕೇಳಿದರು. ಉಪನಾಮವನ್ನು ಹೇಳಿದಾಗ ಆಕೆಯ ಮುಸ್ಲಿಂ ಗುರುತು ಬಹಿರಂಗವಾಯಿತು. ಕೂಡಲೇ ಆ ಭೂಮಾಲೀಕ ಮಹಿಳೆ 'ಇಲ್ಲಿ ವಸತಿ ಲಭ್ಯವಿಲ್ಲ, ನೀನು ಬೇರೆ ಕಡೆ ಹುಡುಕು' ಎಂದು ನೇರವಾಗಿ ಹೇಳಿಬಿಟ್ಟರು" ಎಂದು ಜಸ್ಟಿಸ್ ಭುಯಾನ್ ಹೇಳಿದರು.

ಒಡಿಶಾದ ಗ್ರಾಮೀಣ ಭಾಗದಲ್ಲಿ, ದಲಿತ ಮಹಿಳೆಯರು ತಯಾರಿಸಿದ ಬಿಸಿಯೂಟವನ್ನು ಸೇವಿಸಲು ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಲು ನಿರಾಕರಿಸಿದರು. ಇದು ಶಿಕ್ಷಣದ ಆವರಣದಲ್ಲೂ ಜಾತಿ ವ್ಯವಸ್ಥೆಯ ವಿಷದ ಬೇರುಗಳು ಹರಡಿರುವುದಕ್ಕೆ ಸಾಕ್ಷಿ ಎಂದು ಜಸ್ಟಿಸ್ ಭುಯಾನ್ ಹೇಳಿದರು.

“ಒಡಿಶಾದಲ್ಲಿ ಸರಕಾರವು ಶಾಲೆಗಳಲ್ಲಿ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ಮಕ್ಕಳು ಶಾಲೆಗೆ ಬರುವಂತೆ ಪ್ರೋತ್ಸಾಹಿಸುವುದಾಗಿದೆ. ಈ ಕೆಲಸಕ್ಕಾಗಿ ಅಂಗನವಾಡಿ ಕೇಂದ್ರಗಳ ಹಲವು ಮಹಿಳೆಯರನ್ನು ಅಡುಗೆ ಮಾಡಲು ನೇಮಿಸಲಾಗಿದೆ. ಆದರೆ ಕೆಲವು ಪೋಷಕರು ಅತ್ಯಂತ ಆಕ್ರಮಣಕಾರಿಯಾಗಿ ಪ್ರತಿಭಟನೆ ನಡೆಸಿ, 'ದಲಿತ ಮಹಿಳೆಯರು ತಯಾರಿಸಿದ ಆಹಾರವನ್ನು ನಮ್ಮ ಮಕ್ಕಳು ಸೇವಿಸುವುದಿಲ್ಲ' ಎಂದು ಗದ್ದಲವೆಬ್ಬಿಸಿದರು,” ಎಂದು ಜಸ್ಟಿಸ್ ಭುಯಾನ್ ಹೇಳಿದರು.

"ಈ ಉದಾಹರಣೆಗಳು ನಮ್ಮ ಸಾಮಾಜಿಕ ಬಿರುಕುಗಳು ಎಷ್ಟು ಆಳವಾಗಿವೆ ಎಂಬುದನ್ನು ತೋರಿಸುವ ಒಂದು ಸಣ್ಣ ಸುಳಿವು ಮಾತ್ರ. ವಾಸ್ತವವಾಗಿ, ಇದು ನಮ್ಮ ಗಣರಾಜ್ಯದ 75 ವರ್ಷಗಳ ನಂತರವೂ ನಾವು ಸಾಂವಿಧಾನಿಕ ನೈತಿಕತೆಯ ಮಾನದಂಡದಿಂದ ಎಷ್ಟು ದೂರವಿದ್ದೇವೆ ಎಂಬುದನ್ನು ತೋರಿಸುವ ಕನ್ನಡಿಯಾಗಿದೆ,” ಎಂದು ನ್ಯಾಯಮೂರ್ತಿಗಳು ಹೇಳಿದರು.

ನ್ಯಾಯಮೂರ್ತಿಗಳ ಪ್ರಕಾರ, 'ಸಾಂವಿಧಾನಿಕ ನೈತಿಕತೆ' ಎನ್ನುವುದು ಕೇವಲ ನ್ಯಾಯಾಲಯಗಳಿಗೆ ಸೀಮಿತವಾಗಬಾರದು. ಅದು ಪ್ರತಿಯೊಬ್ಬ ನಾಗರಿಕನ ಜೀವನದ ಭಾಗವಾಗಬೇಕು. ಸಾಂವಿಧಾನಿಕ ನೈತಿಕತೆಯು ಸಾರ್ವಜನಿಕ ನೈತಿಕತೆಗಿಂತ ಮಿಗಿಲಾಗಿರಬೇಕು" ಎಂದು ಜಸ್ಟಿಸ್ ಭುಯಾನ್ ಪ್ರತಿಪಾದಿಸಿದರು. ಅಂದರೆ, ಸಮಾಜದ ಬಹುಪಾಲು ಜನರು ಒಂದು ತಾರತಮ್ಯವನ್ನು ಒಪ್ಪಿಕೊಂಡರೂ, ಸಂವಿಧಾನವು ಅದನ್ನು ಒಪ್ಪುವುದಿಲ್ಲ ಎಂದಾಗಿದೆ.

ತೆಲಂಗಾಣದ ನ್ಯಾಯಾಂಗ ಸೇವೆಯಲ್ಲಿ ಶೇ. 50ಕ್ಕಿಂತ ಹೆಚ್ಚು ಮಹಿಳೆಯರು ಮತ್ತು ದಲಿತ, ಬುಡಕಟ್ಟು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಪ್ರಾತಿನಿಧ್ಯ ಇರುವುದನ್ನು ಅವರು ಶ್ಲಾಘಿಸಿದರು. ನ್ಯಾಯಾಂಗವು 'ಕಾಮನಬಿಲ್ಲು' ಸಂಸ್ಥೆಯಾಗಬೇಕು, ಅಂದರೆ ಸಮಾಜದ ಎಲ್ಲಾ ವರ್ಗದ ಜನರೂ ಅಲ್ಲಿರಬೇಕು ಎಂದು ಹೇಳಿದರು.

ನ್ಯಾಯಾಂಗವು ಎಲ್ಲಾ ವರ್ಗಗಳ, ಲಿಂಗಗಳ ಮತ್ತು ಸಮುದಾಯಗಳ ಪ್ರಾತಿನಿಧ್ಯವನ್ನು ಹೊಂದಿದಾಗ ಮಾತ್ರ ಜನಸಾಮಾನ್ಯರಿಗೆ ಅದರ ಮೇಲೆ ನಂಬಿಕೆ ಬರುತ್ತದೆ ಎಂದು ಜಸ್ಟಿಸ್ ಭುಯಾನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News