×
Ad

ದಿಲ್ಲಿ ಅಬಕಾರಿ ನೀತಿ ಪ್ರಕರಣ | ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾರನ್ನು ಖುಲಾಸೆಗೊಳಿಸಿದ ದಿಲ್ಲಿ ನ್ಯಾಯಾಲಯ

ಸಿಬಿಐ ಆರೋಪಪಟ್ಟಿಗೆ ಕೋರ್ಟ್ ಅಸಮಾಧಾನ; ತನಿಖಾಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಆದೇಶ

Update: 2026-02-27 11:38 IST

Photo: PTI

ಹೊಸದಿಲ್ಲಿ, ಫೆ. 27: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ದಿಲ್ಲಿಯ ನ್ಯಾಯಾಲಯವೊಂದು ಶುಕ್ರವಾರ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ, ತೆಲಂಗಾಣದ ರಾಜಕಾರಣಿ ಕೆ. ಕವಿತಾ ಮತ್ತು ಆಪ್ ನಾಯಕ ವಿಜಯ್ ನಾಯರ್ ಸೇರಿದಂತೆ 23 ಮಂದಿಯನ್ನು ಆರೋಪಮುಕ್ತಗೊಳಿಸಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ)ದ ಆರೋಪಪಟ್ಟಿಯಲ್ಲಿ ಪುರಾವೆಗಳ ಕೊರತೆಯಿದೆ ಮತ್ತು ತನಿಖೆಯಲ್ಲಿ ಗಂಭೀರ ಲೋಪಗಳಾಗಿವೆ ಎಂದು ಹೇಳಿದ ನ್ಯಾಯಾಲಯವು ಅದನ್ನು ಗಣನೆಗೆ ತೆಗೆದುಕೊಳ್ಳಲು ನಿರಾಕರಿಸಿತು.

ಅದೂ ಅಲ್ಲದೆ, ಪ್ರಕರಣದ ತನಿಖೆಯನ್ನು ನಡೆಸಿದ ರೀತಿಯ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರ ರೋಸ್ ಅವೆನ್ಯೂ ನ್ಯಾಯಾಲಯವು, ತನಿಖಾಧಿಕಾರಿಯ ವಿರುದ್ಧ ಇಲಾಖಾ ತನಿಖೆ ನಡೆಸುವಂತೆಯೂ ಆದೇಶಿಸಿತು.

ಅಬಕಾರಿ ನೀತಿಯಲ್ಲಿ ಯಾವುದೇ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶವಿರಲಿಲ್ಲ ಎಂದು ನ್ಯಾಯಾಲಯ ಘೋಷಿಸಿತು. ಸಿಬಿಐಯು ಸದೃಢ ಪುರಾವೆಗಳ ಆಧಾರದಲ್ಲಿ ಅಲ್ಲ, ಕೇವಲ ಊಹಾಪೋಹಗಳ ಆಧಾರದಲ್ಲಿ ಪಿತೂರಿಯೊಂದನ್ನು ಸೃಷ್ಟಿಸಲು ಪ್ರಯತ್ನಿಸಿತು ಎಂದು ನ್ಯಾಯಾಲಯ ಹೇಳಿತು.

ಸಿಬಿಐ 2022 ಆಗಸ್ಟ್‌ನಲ್ಲಿ ಕ್ರಿಮಿನಲ್ ಪಿತೂರಿ, ವಂಚನೆ, ಸಾಕ್ಷ್ಯಗಳ ನಾಶ ಮುಂತಾದ ಆರೋಪಗಳು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಕೇಜ್ರಿವಾಲ್ ಮತ್ತಿತರರ ವಿರುದ್ಧ ಮೊಕದ್ದಮೆ ದಾಖಲಿಸಿತ್ತು. ಒಟ್ಟು ಮೂರು ಆರೋಪಪಟ್ಟಿಗಳನ್ನು ದಾಖಲಿಸಲಾಗಿತ್ತು. ಎರಡನೇ ಆರೋಪಪಟ್ಟಿಯಲ್ಲಿ ಮುಖ್ಯವಾಗಿ ಕೇಜ್ರಿವಾಲ್‌ರನ್ನು ಹೆಸರಿಸಲಾಗಿತ್ತು.

ಅಬಕಾರಿ ನೀತಿಯನ್ನು ರೂಪಿಸುವುದಕ್ಕಾಗಿ ‘‘ಸೌತ್ ಲಾಬಿ’’ಯು 100 ಕೋಟಿ ರೂಪಾಯಿ ಪಾವತಿಸಿದೆ ಎಂಬುದಾಗಿ ಸಿಬಿಐ ಆರೋಪಿಸಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿ, ಹವಾಲಾ ಹಣ ವರ್ಗಾವಣೆಗಳು ಮತ್ತು ಶೆಲ್ (ನಕಲಿ) ಕಂಪೆನಿಗಳ ಬಗ್ಗೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಅನುಷ್ಠಾನ ನಿರ್ದೇಶನಾಲಯವು ಪ್ರತ್ಯೇಕ ಪ್ರಕರಣವೊಂದನ್ನು ನಡೆಸುತ್ತಿದೆ. ಅನುಷ್ಠಾನ ನಿರ್ದೇಶನಾಲಯವು 2024 ಮಾರ್ಚ್‌ನಲ್ಲಿ ಕೇಜ್ರಿವಾಲ್‌ ಅವರನ್ನು ಬಂಧಿಸಿತ್ತು. ಬಳಿಕ ಸಿಬಿಐ ಅವರನ್ನು ಬಂಧಿಸಿತು. ಬಳಿಕ, ಸುಪ್ರೀಂ ಕೋರ್ಟ್ ಈ ಎರಡೂ ಪ್ರಕರಣಗಳಲ್ಲಿ ಕೇಜ್ರಿವಾಲ್‌ಗೆ ಜಾಮೀನು ನೀಡಿತು. ಅವರು ಐದು ತಿಂಗಳಿಗೂ ಹೆಚ್ಚು ಸಮಯ ಜೈಲಿನಲ್ಲಿ ಕಳೆದಿದ್ದಾರೆ.

ದೋಷಮುಕ್ತವಲ್ಲ, ಸಾರಾಸಗಟು ಆರೋಪಮುಕ್ತ!

ನ್ಯಾಯಾಲಯವು ಸಿಬಿಐ ತನಿಖೆಯನ್ನು ಎಷ್ಟು ನಿಕೃಷ್ಟವಾಗಿ ಕಂಡಿದೆಯೆಂದರೆ, ಅದು ಅಬಕಾರಿ ನೀತಿ ಪ್ರಕರಣದ ಆರೋಪಿಗಳನ್ನು ‘‘ದೋಷಮುಕ್ತ ಗೊಳಿಸಿದ್ದಲ್ಲ, ಸಾರಾಸಗಟು ‘‘ಆರೋಪಮುಕ್ತ’’ಗೊಳಿಸಿದೆ. ಅಂದರೆ, ಈ ಪ್ರಕರಣದ ವಿಚಾರಣೆ ನಡೆಸಲು ಬೇಕಾಗುವ ಕನಿಷ್ಠ ಪುರಾವೆಯೂ ಅವರ ವಿರುದ್ಧದ ಆರೋಪಗಳಲ್ಲಿ ಇಲ್ಲ ಎಂಬ ಅಭಿಪ್ರಾಯಕ್ಕೆ ನ್ಯಾಯಾಲಯ ಬಂದಿದೆ.

ಆರೋಪಮುಕ್ತ ಎಂದರೆ ಅದು ಅಪರಾಧಿ ಅಥವಾ ಅಮಾಯಕ ಎಂಬ ಕುರಿತ ತೀರ್ಪಲ್ಲ. ಅದು ಇಡೀ ಕಲಾಪವನ್ನೇ ರದ್ದುಗೊಳಿಸುವುದಾಗಿದೆ. ‘‘ಅದು ನ್ಯಾಯಾಲಯದ ವಿಚಾರಣೆ ಆರಂಭಗೊಳ್ಳುವ ಮುನ್ನವೇ ಸಂಭವಿಸುತ್ತದೆ. ನ್ಯಾಯಾಲಯದಲ್ಲಿ ಯಾವುದೇ ಸಾಕ್ಷಿಯ ವಿಚಾರಣೆ ಅಥವಾ ಯಾವುದೇ ಪುರಾವೆಯ ಪರಿಶೀಲನೆಯ ಮುನ್ನವೇ ನ್ಯಾಯಾಲಯದ ಕಲಾಪ ಕೊನೆಗೊಳ್ಳುತ್ತದೆ’’ ಎಂದು ವಕೀಲರೊಬ್ಬರು ಹೇಳುತ್ತಾರೆ.

ಆರೋಪವನ್ನು ಮೇಲ್ನೋಟಕ್ಕೆ ಸಾಬೀತುಪಡಿಸಲು ಬೇಕಾಗುವಷ್ಟು ಪುರಾವೆ ಇಲ್ಲದಾಗ ಆರೋಪಿಗಳ ವಿರುದ್ಧ ಆರೋಪ ಹೊರಿಸುವ ಮೊದಲೇ ಅವರನ್ನು ಆರೋಪಮುಕ್ತಗೊಳಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ.

ಒಂದು ಪ್ರಕರಣದಲ್ಲಿ ನಾಲ್ಕು ಹಂತಗಳು ಇರುತ್ತವೆ. ದೂರಿಗೆ ಸಂಬಂಧಿಸಿ ಮೊದಲ ಮಾಹಿತಿ ವರದಿ (ಎಫ್ಐಆರ್) ದಾಖಲು, ಪೊಲೀಸರು ಅಥವಾ ತನಿಖಾ ಸಂಸ್ಥೆಯು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವುದು, ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗುವಷ್ಟು ಪುರಾವೆಗಳನ್ನು ಹೊಂದಿವೆಯೇ ಎಂದು ನ್ಯಾಯಾಲಯ ಪರಿಶೀಲಿಸುವುದು ಹಾಗೂ ದೋಷಿ ಅಥವಾ ಅಮಾಯಕ ಎಂಬುದನ್ನು ನಿರ್ಧರಿಸುವ ನ್ಯಾಯಾಲಯದ ವಿಚಾರಣಾ ಕಲಾಪ.

ಕೇಜ್ರಿವಾಲ್ ಪ್ರಕರಣದಲ್ಲಿ, ನ್ಯಾಯಾಲಯವು ಪ್ರಕರಣದ ಕಲಾಪಗಳನ್ನು ಮೂರನೇ ಹಂತದಲ್ಲೇ ನಿಲ್ಲಿಸಿದೆ.

ನ್ಯಾಯಾಲಯವು ಆರೋಪಮುಕ್ತಗೊಳಿಸಿದರೂ, ಹೊಸ ಪುರಾವೆಗಳು ಸಿಕ್ಕಿದರೆ ಪ್ರಾಸಿಕ್ಯೂಶನ್ ಆರೋಪಿಗಳ ವಿರುದ್ಧ ಹೊಸದಾಗಿ ಆರೋಪಪಟ್ಟಿಯನ್ನು ಸಲ್ಲಿಸಬಹುದಾಗಿದೆ ಅಥವಾ ಅದು ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ.

ತೀರ್ಪು ಕೇಳಿ ಕಣ್ಣೀರಿಟ್ಟ ಕೇಜ್ರಿವಾಲ್

ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ತನ್ನನ್ನು ಆರೋಪಮುಕ್ತಗೊಳಿಸಿ ದಿಲ್ಲಿಯ ವಿಶೇಷ ನ್ಯಾಯಾಲಯವು ತೀರ್ಪು ನೀಡಿದ ಬಳಿಕ ಭಾವಾವೇಶಕ್ಕೊಳಗಾದ ಅರವಿಂದ ಕೇಜ್ರಿವಾಲ್ ಕಣ್ಣೀರು ಹರಿಸುತ್ತಾ ಮಾಧ್ಯಮಗಳೊಂದಿಗೆ ಮಾತನಾಡಿದರು. ನಾನು ನನ್ನ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯನ್ನಲ್ಲದೆ ಇನ್ನೇನನ್ನೂ ಗಳಿಸಿಲ್ಲ ಎಂದು ಹೇಳಿದರು.

ಇಡೀ ಪ್ರಕರಣವು ಕಪೋಲಕಲ್ಪಿತವಾಗಿದೆ ಎಂದು ಹೇಳಿದ ಅವರು, ಕೊನೆಯಲ್ಲಿ ಅನ್ಯಾಯ ಮತ್ತು ಅನಾಚಾರಕ್ಕೆ ಸೋಲಾಗುತ್ತದೆ ಹಾಗೂ ಸತ್ಯ ಜಯಿಸುತ್ತದೆ, ‘ಸತ್ಯಮೇವ ಜಯತೇ’’ ಎಂದರು.

ಬಿಜೆಪಿಯು ಕಳೆದ ಕೆಲವು ವರ್ಷಗಳಿಂದ ನನ್ನ ಮತ್ತು ಪಕ್ಷದ ನನ್ನ ಸಹೋದ್ಯೋಗಿಗಳ ವಿರುದ್ಧ ಅಬಕಾರಿ ಹಗರಣದ ಆರೋಪಗಳನ್ನು ಹೊರಿಸುತ್ತಾ ಬಂದಿದೆ ಎಂದು ಹೇಳಿದ ಅವರು, ಆದರೆ, ಶುಕ್ರವಾರ ನ್ಯಾಯಾಲಯವು ಆ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದೆ ಮತ್ತು ಪ್ರತಿಯೊಬ್ಬರನ್ನೂ ಆರೋಪಮುಕ್ತಗೊಳಿಸಿದೆ ಎಂದರು.

‘‘ಸತ್ಯವೇ ಗೆಲ್ಲುತ್ತದೆ ಎಂಬುದಾಗಿ ನಾವು ಹೇಳುತ್ತಲೇ ಬಂದಿದ್ದೇವೆ. ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ನಂಬಿಕೆಯಿದೆ. ನಮಗೆ ನ್ಯಾಯ ನೀಡಿದ ನ್ಯಾಯಾಧೀಶರಿಗೆ ನಾವು ಕೃತಜ್ಞರಾಗಿದ್ದೇವೆ. ಸತ್ಯ ಗೆದ್ದಿದೆ. ದೇವರು ನಮ್ಮೊಂದಿಗೆ ಇದ್ದಾರೆ ಎಂದು ನಾನು ಹೇಳುತ್ತಾ ಬಂದಿದ್ದೇನೆ’’ ಎಂದರು.

‘‘ಸ್ವತಂತ್ರ ಭಾರತದ ಅತಿ ದೊಡ್ಡ ರಾಜಕೀಯ ಪಿತೂರಿ’’

ದಿಲ್ಲಿ ಸರಕಾರದ ಅಬಕಾರಿ ನೀತಿ ಪ್ರಕರಣವು ಸ್ವತಂತ್ರ ಭಾರತದ ಅತಿ ದೊಡ್ಡ ರಾಜಕೀಯ ಪಿತೂರಿಯಾಗಿದೆ ಎಂದು ಬಣ್ಣಿಸಿದ ಮಾಜಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಇದನ್ನು ರೂಪಿಸಿದವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷವನ್ನು ಮುಗಿಸಲು ಪಕ್ಷದ ಐವರು ಉನ್ನತ ನಾಯಕರನ್ನು ಜೈಲಿಗೆ ಕಳುಹಿಸಲಾಯಿತು ಎಂದು ಪಕ್ಷದ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಹೇಳಿದರು.

‘‘ಭಾರತೀಯ ಇತಿಹಾಸದಲ್ಲೇ ಮೊದಲ ಬಾರಿಗೆ, ಹಾಲಿ ಮುಖ್ಯಮಂತ್ರಿಯೊಬ್ಬರನ್ನು ಮನೆಯಿಂದ ಎಳೆದುಕೊಂಡು ಹೋಗಿ ಜೈಲಿನಲ್ಲಿರಿಸಲಾಯಿತು. ಜೈಲಿನಲ್ಲಿ ಆರು ತಿಂಗಳ ಕಾಲ ಇರಿಸಲಾಯಿತು. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯರನ್ನು ಅವರು ಸುಮಾರು ಎರಡು ವರ್ಷಗಳ ಕಾಲ ಜೈಲಿನಲ್ಲಿರಿಸಿದರು. ಇಡೀ ಪ್ರಕರಣವೇ ಸುಳ್ಳು ಪ್ರಕರಣವಾಗಿತ್ತು’’ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ‘‘ಅಧಿಕಾರಕ್ಕಾಗಿ ದೇಶದ ಜೊತೆಗೆ ಚೆಲ್ಲಾಟವಾಡಬೇಡಿ. ಈ ರೀತಿಯಲ್ಲಿ ಸಂವಿಧಾನವನ್ನು ಉಲ್ಲಂಘಿಸಬೇಡಿ. ನಿಮಗೆ ಅಧಿಕಾರ ಬೇಕಾದರೆ ಒಳ್ಳೆಯ ಕೆಲಸ ಮಾಡಿ. ದೇಶ ಇಂದು ಅಗಾಧ ಸಮಸ್ಯೆಗಳನ್ನು ಎದುರಿಸುತ್ತಿದೆ. ಹಣದುಬ್ಬರ, ಬೆಲೆಯೇರಿಕೆ, ನಿರುದ್ಯೋಗ ಜನರನ್ನು ಕಾಡುತ್ತಿದೆ. ದೇಶದ ರಸ್ತೆಗಳು ಹಾಳಾಗಿವೆ. ಇಡೀ ದೇಶವನ್ನು ಮಾಲಿನ್ಯ ಆವರಿಸಿದೆ. ದೇಶದ ಮೂಲೆ ಮೂಲೆಗಳಲ್ಲಿ ಅಗಾಧ ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಪರಿಹರಿಸಿ ಅಧಿಕಾರಕ್ಕೆ ಬನ್ನಿ’’ ಎಂದು ಹೇಳಿದರು.

ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು: ಸಿಬಿಐ

ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ, ಅರವಿಂದ ಕೇಜ್ರಿವಾಲ್ ಸೇರಿದಂತೆ ಎಲ್ಲಾ 23 ಆರೋಪಿಗಳನ್ನು ಆರೋಪಮುಕ್ತಗೊಳಿಸಿದ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲು ಸಿಬಿಐ ನಿರ್ಧರಿಸಿದೆ. ತನ್ನ ತನಿಖೆಯ ‘‘ಮಹತ್ವದ ಅಂಶಗಳನ್ನು’’ ನ್ಯಾಯಾಲಯವು ಸರಿಯಾಗಿ ಪರಿಗಣಿಸಿಲ್ಲ ಅಥವಾ ಅವುಗಳನ್ನು ತೀರ್ಪಿನಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಅದು ಹೇಳಿದೆ.

‘‘ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ತಕ್ಷಣವೇ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಿಬಿಐ ನಿರ್ಧರಿಸಿದೆ. ಅದರ ತನಿಖೆಯ ಹಲವಾರು ಅಂಶಗಳನ್ನು ಒಂದೋ ಸಾಕಷ್ಟು ಮಹತ್ವವನ್ನು ಕೊಡಲಾಗಿಲ್ಲ ಅಥವಾ ನಿರ್ಲಕ್ಷಿಸಲಾಗಿದೆ’’ ಎಂದು ಸಿಬಿಐ ವಕ್ತಾರರೊಬ್ಬರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News