×
Ad

ದೆಹಲಿ: ಮಾಲೀಕನ ಮಗನನ್ನು ಅಪಹರಿಸಿ ಹತ್ಯೆಗೈದ ಚಾಲಕ; ಪ್ರತೀಕಾರದ ಕೊಲೆ ಶಂಕೆ

Update: 2025-10-22 13:01 IST

ಹೊಸದಿಲ್ಲಿ: ವ್ಯಕ್ತಿಯೊಬ್ಬರ ಸಾರಿಗೆ ವ್ಯವಹಾರದಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದವನೊಬ್ಬ ಅವರ ಐದು ವರ್ಷದ ಮಗುವನ್ನು ಅಪಹರಿಸಿ ಇಟ್ಟಿಗೆಯಿಂದ ಜಜ್ಜಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಪ್ರಕರಣ ದೆಹಲಿಯ ನರೇಲಾದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಇದು ಪ್ರತೀಕಾರದ ಹತ್ಯೆಯಾಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಆರೋಪಿ ನೀತು ಎಂಬಾತನ ಬಾಡಿಗೆ ಮನೆಯಿಂದ ಬಾಲಕನ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ. ನೀತು ತಲೆ ಮರೆಸಿಕೊಂಡಿದ್ದು, ಆತನ ಪತ್ತೆಯಾಗಿ ಹಲವು ಶೋಧ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಸಂತ್ರಸ್ತ ಬಾಲಕನ ತಂದೆ ಕೆಲ ದಿನಗಳ ಹಿಂದೆ ನೀತುಗೆ ಛೀಮಾರಿ ಹಾಕಿದ್ದರು ಎನ್ನಲಾಗಿದೆ.

ನಿನ್ನೆ ಸಂಜೆ 3.30ರ ವೇಳೆಗೆ ನರೇಲಾ ಕೈಗಾರಿಕಾ ಪ್ರದೇಶ ಪೊಲೀಟ್ ಠಾಣೆಗೆ ಅಪಹರಣವಾದ ಬಗ್ಗೆ ಮಾಹಿತಿ ಬಂದಿತ್ತು ಎಂದು ದೆಹಲಿ ಡಿಸಿಪಿ ಹರೇಶ್ವರ್ ಸ್ವಾಮಿ ಹೇಳಿದ್ದಾರೆ. ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕ ನಾಪತ್ತೆಯಾಗಿದ್ದು ವಿಚಾರಾಣೆಯಿಂದ ತಿಳಿದು ಬಂದಿತ್ತು ಎಂದು ವಿವರಿಸಿದ್ದಾರೆ.

ತಕ್ಷಣವೇ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ಶೋಧ ಆರಂಭಿಸಿದ್ದರು. ಬಳಿಕ ಬಾಲಕನ ಮೃತದೇಹ ನೀತುವಿನ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ. ಬಾಲಕನ ತಂದೆ ಏಳೆಂಟು ಸಾರಿಗೆ ವಾಹನಗಳನ್ನು ಹೊಂದಿದ್ದು, ನೀತು ಹಾಗೂ ವಾಸಿಂ ಎಂಬ ಇಬ್ಬರು ಚಾಲಕರನ್ನು ನೇಮಕ ಮಾಡಿಕೊಂಡಿದ್ದರು. ಸೋಮವಾರ ಸಂಜೆ ಇಬ್ಬರೂ ಚಾಲಕರು ಮದ್ಯಪಾನದ ಅಮಲಿನಲ್ಲಿ ಜಗಳವಾಡಿಕೊಂಡಿದ್ದರು. ಆಗ ನೀತು, ವಾಸಿಂನನ್ನು ಹೊಡೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.

ಈ ದುರ್ನಡತೆಗಾಗಿ ನೀತುವನ್ನು ಕರೆಸಿಕೊಂಡ ಮಾಲೀಕರು ನೀತುಗೆ ನಾಲ್ಕು ಏಟು ಹೊಡೆದಿದ್ದರು. ಇದರಿಂದ ಅವಮಾನಿತನಾದ ನೀತು ಮಂಗಳವಾರ ಸಂಜೆ ಮನೆಯ ಹೊರಗೆ ಆಡುತ್ತಿದ್ದ ಮಗುವನ್ನು ಅಪಹರಿಸಿ ಬಾಡಿಗೆ ಮನೆಗೆ ಕರೆದೊಯ್ದು ಇಟ್ಟಿಗೆ ಮತ್ತು ಚಾಕುವಿನಿಂದ ಸಾಯಿಸಿದ್ದಾಗಿ ಪೊಲೀಸರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News