ನಕಲಿ ORS ನಿಷೇಧಿಸಿದ್ದ FSSAI ಆದೇಶಕ್ಕೆ ದಿಲ್ಲಿ ಹೈಕೋರ್ಟ್ ಮಧ್ಯಂತರ ತಡೆ
ಸಾಂದರ್ಭಿಕ ಚಿತ್ರ
ಹೊಸ ದಿಲ್ಲಿ: ದಾರಿ ತಪ್ಪಿಸುವ ಅಥವಾ ನಕಲಿ ಒಆರ್‌ಎಸ್ ಪಾನೀಯಗಳನ್ನು ನಿಷೇಧಿಸಿದ್ದ ಭಾರತೀಯ ಆಹಾರ ಸುರಕ್ಷತಾ ಮತ್ತು ಪ್ರಮಾಣೀಕರಣ ಪ್ರಾಧಿಕಾರ(FSSAI) ಕ್ರಮಕ್ಕೆ ಮಧ್ಯಂತರ ತಡೆ ನೀಡಿರುವ ದಿಲ್ಲಿ ಹೈಕೋರ್ಟ್, ನಿಷೇಧಿಸಲ್ಪಟ್ಟಿದ್ದ ಕೆಲವು ವಿವಾದಿತ ಒಆರ್‌ಎಸ್ ಪಾನೀಯಗಳ ಮಾರಾಟಕ್ಕೆ ಅನುಮತಿ ನೀಡಿದೆ.
ಇದಕ್ಕೂ ಮುನ್ನ, ಅಕ್ಟೋಬರ್ 14ರಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸಿನ ಸೂತ್ರದನ್ವಯ ತಯಾರಿಸದ ಒಆರ್‌ಎಸ್ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿ ಭಾರತೀಯ ಆಹಾರ ಸುರಕ್ಷತಾ ಮತ್ತು ಪ್ರಮಾಣೀಕರಣ ಪ್ರಾಧಿಕಾರ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ ಅಂಗ ಸಂಸ್ಥೆಯಾದ ಜೆಟಿಎನ್ಎತಲ್ ಕನ್ಸೂಮರ್ ಹೆಲ್ತ್ ಸಂಸ್ಥೆ ದಿಲ್ಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ಈ ಅರ್ಜಿಯಲ್ಲಿ ತನ್ನ ಬಳಿ ಸುಮಾರು 150-180 ಕೋಟಿ ರೂ. ಮೊತ್ತದ ಪಾನೀಯ ಉತ್ಪನ್ನಗಳ ಸಂಗ್ರಹವಿದ್ದು, ಈ ಆದೇಶದಿಂದ ವಾಣಿಜ್ಯ ತೊಂದರೆಯುಂಟಾಗಿದೆ ಎಂದು ಜೆಟಿಎನ್ಎಲ್ ಕನ್ಸೂಮರ್ ಹೆಲ್ತ್ ಸಂಸ್ಥೆ ವಾದಿಸಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಭಾರತೀಯ ಆಹಾರ ಸುರಕ್ಷತಾ ಮತ್ತು ಪ್ರಮಾಣೀಕರಣ ಪ್ರಾಧಿಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿದೆ.
ಕಂಪೆನಿಯ ವಿಚಾರಣೆಗೆ ಸಾಕಷ್ಟು ಅವಕಾಶ ನೀಡುವವರೆಗೂ ಭಾರತೀಯ ಆಹಾರ ಸುರಕ್ಷತಾ ಮತ್ತು ಪ್ರಮಾಣೀಕರಣ ಪ್ರಾಧಿಕಾರ ತನ್ನ ನಿರ್ದೇಶನವನ್ನು ಜಾರಿಗೊಳಿಸಬಾರದು ಎಂದು ನ್ಯಾ.ಸಚಿನ್ ದತ್ತಾ ಹೇಳಿದರು.
ಯಾವುದೇ ಆಹಾರ ಅಥವಾ ಪಾನೀಯ ಉತ್ಪನ್ನ ಒಆರ್‌ಎಸ್ ಎಂಬ ಪ್ರಿಫಿಕ್ಸ್ ಅಥವಾ ಸಫಿಕ್ಸ್ ಅನ್ನು ಬಳಸಿದರೆ, ಅಂತಹ ಉತ್ಪನ್ನಗಳನ್ನು ಆಹಾರ ಸುರಕ್ಷತಾ ಮತ್ತು ಪ್ರಮಾಣೀಕರಣ ಕಾಯ್ದೆ2006ರ ಅಡಿ ತಪ್ಪು ಬ್ರಾಂಡಿಂಗ್ ಎಂದು ಪರಿಗಣಿಸಲಾಗುವುದು ಎಂದು ಅಕ್ಟೋಬರ್ 14ರ ತನ್ನ ಆದೇಶದಲ್ಲಿ ಭಾರತೀಯ ಆಹಾರ ಸುರಕ್ಷತಾ ಮತ್ತು ಪ್ರಮಾಣೀಕರಣ ಪ್ರಾಧಿಕಾರ ಎಚ್ಚರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ ಅಂಗ ಸಂಸ್ಥೆ ಜೆಟಿಎನ್ಎಲ್ ಕನ್ಸೂಮರ್ ಹೆಲ್ತ್ ಸಂಸ್ಥೆ ದಿಲ್ಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.