ಆನ್‌ಲೈನ್ ಗೇಮಿಂಗ್‌ನಿಂದ ಜನರು ಕಳೆದುಕೊಳ್ಳುತ್ತಿರುವ ಹಣ ಎಷ್ಟು ಗೊತ್ತೇ?
ಸಾಂದರ್ಭಿಕ ಚಿತ್ರ PC: freepik
ಹೊಸದಿಲ್ಲಿ: ಆನ್‌ಲೈನ್ ಗೇಮಿಂಗ್‌ನಿಂದ ದೇಶದಲ್ಲಿ 45 ಕೋಟಿ ಮಂದಿ ಪ್ರತಿ ವರ್ಷ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸರ್ಕಾರ ಅಂದಾಜಿಸಿದೆ.
ಆನ್‌ಲೈನ್ ರಿಯಲ್ ಮನಿ ಗೇಮಿಂಗ್ ಸಮಾಜದ ಪ್ರಮುಖ ಸಮಸ್ಯೆಯಾಗಿ ರೂಪುಗೊಂಡಿದೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ ಎಂದು ಉನ್ನತ ಮೂಲಗಳು ಹೇಳಿವೆ. ಆದಾಯ ನಷ್ಟವಾಗುವ ಬದಲು ಜನರ ಕಲ್ಯಾಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಇದನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
"ಪ್ರತಿ ವರ್ಷ ಸುಮಾರು 45 ಕೋಟಿ ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ. ಒಟ್ಟು ನಷ್ಟದ ಮೌಲ್ಯ ಸುಮಾರು 20 ಸಾವಿರ ಕೋಟಿ ರೂಪಾಯಿಗಳು" ಎಂದು ಮೂಲಗಳು ಹೇಳಿವೆ. ಲೋಕಸಭೆಯಲ್ಲಿ ಬುಧವಾರ ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಮಸೂದೆಯನ್ನು ಮಂಡಿಸುವ ಸಂದರ್ಭದಲ್ಲೇ ಈ ಆತಂಕಕಾರಿ ಅಂಕಿ ಅಂಶ ಹೊರಬಿದ್ದಿದೆ.
ಹಣವನ್ನು ಒಳಗೊಂಡ ಆನ್‌ಲೈನ್ ಗೇಮಿಂಗ್ ಪರಿಣಾಮದ ಬಗ್ಗೆ ಪ್ರತಿ ಸಂಸದರು ಕೂಡಾ ಆತಂಕ ವ್ಯಕ್ತಪಡಿಸಿದ್ದಾರೆ. ಈ ಉದ್ಯಮದ ಮೂರನೇ ಒಂದರಷ್ಟು ಆದಾಯ ಮತ್ತು ಸಮಾಜ ಕಲ್ಯಾಣದ ನಡುವೆ ಸಮಾಜ ಕಲ್ಯಾಣವನ್ನು ಸರ್ಕಾರ ಆಯ್ಕೆ ಮಾಡಿಕೊಂಡಿದೆ ಎಂದು ಮೂಲಗಳು ಪ್ರತಿಪಾದಿಸಿವೆ.
ಯಾವುದೇ ಬಗೆಯ ಹಣವನ್ನು ಒಳಗೊಂಡ ಗೇಮಿಂಗ್ ನಿಷೇಧಿಸುವ ಜತೆಗೆ ಆನ್‌ಲೈನ್ ಸೋಶಿಯಲ್ ಗೇಮಿಂಗ್ ಮತ್ತು ಇ-ಕ್ರೀಡೆಗಳನ್ನು ಉತ್ತೇಜಿಸಲು ಮಸೂದೆ ಉದ್ದೇಶಿಸಿದೆ.