×
Ad

‘ಟೊಮೆಟೊ ತಿನ್ನಬೇಡಿ, ಮನೆಯಲ್ಲೇ ಬೆಳೆಸಿ’: ಉತ್ತರ ಪ್ರದೇಶ ಸಚಿವೆಯ ಹೇಳಿಕೆ ವೈರಲ್

Update: 2023-07-23 21:44 IST

Photo: twitter 

ಲಕ್ನೋ: ಈ ದಿನಗಳಲ್ಲಿ ಟೊಮೆಟೊ ಬೆಲೆ ಏರಿಕೆ ಹೊಸದೇನಲ್ಲ ಮತ್ತು ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಜನರು ಈಗ ಟೊಮೆಟೊ ತಿನ್ನಬಾರದು ಎಂಬ ಉತ್ತರ ಪ್ರದೇಶದ ಸಚಿವೆ ಪ್ರತಿಭಾ ಶುಕ್ಲಾರ ಹೇಳಿಕೆ ವೈರಲ್ ಆಗಿದೆ.

ನೀವು ಟೊಮೆಟೊ ತಿನ್ನುವುದನ್ನು ನಿಲ್ಲಿಸಿದರೆ ಬೆಲೆಗಳು ಅನಿವಾರ್ಯವಾಗಿ ಇಳಿಯುತ್ತವೆ. ಜನರು ತಮ್ಮ ಮನೆಗಳಲ್ಲಿಯೇ ಟೊಮೆಟೊ ಬೆಳೆಸಬೇಕು. ನೀವು ಟೊಮೆಟೊ ಬದಲು ಲಿಂಬೆಹಣ್ಣನ್ನು ಸಹ ತಿನ್ನಬಹುದು. ಯಾರೂ ಟೊಮೆಟೊ ತಿನ್ನದಿದ್ದರೆ ಬೆಲೆ ತಾನಾಗಿಯೇ ಇಳಿಯುತ್ತದೆ ಎಂದು ಶುಕ್ಲಾ ಹೇಳಿದರು. ದೇಶಾದ್ಯಂತ ಟೊಮೆಟೊ ಬೆಲೆ ಹೆಚ್ಚುತ್ತಲೇ ಇದ್ದು, ಪ್ರತಿ ಕೆ.ಜಿ.ಗೆ 120 ರೂ.ಅಧಿಕ ಬೆಲೆಗೆ ಮಾರಾಟಗೊಳ್ಳುತ್ತಿರುವ ನಡುವೆಯೇ ಸಚಿವೆಯ ಈ ಹೇಳಿಕೆ ಹೊರಬಿದ್ದಿದೆ.

ಸಚಿವೆಯ ಹೇಳಿಕೆಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಟೊಮೆಟೊ ಬೆಲೆಗಳನ್ನು ಇಳಿಸಲು ಯಾವುದೇ ಮಾರ್ಗವಿಲ್ಲ ಎಂದು ಸರಕಾರವೇ ಒಪ್ಪಿಕೊಂಡಂತಾಗಿದೆ ಎಂದು ವ್ಯಾಖ್ಯಾನಿಸಿದೆ. ‘ಯಾವುದೇ ವಸ್ತು ದುಬಾರಿಯಾಗಿದ್ದರೆ ಅದನ್ನು ಬಳಸುವುದನ್ನೇ ಬಿಟ್ಟು ಬಿಡಿ ’ ಎಂಬ ಈ ಸಲಹೆ ಉ.ಪ್ರದೇಶದ ಸಚಿವೆಯಿಂದ ಬಂದಿದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸ್ಪರ್ಧೆಯಲ್ಲಿ ನೀವು ನಿಮ್ಮ ಸಹೋದ್ಯೋಗಿಗಳನ್ನು ಸೋಲಿಸಿದ್ದೀರಿ, ಅಭಿನಂದನೆಗಳು ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ ಹೇಳಿದರು.

ಈ ನಡುವೆ ಸಹಾಯಕ ಗ್ರಾಹಕ ವ್ಯವಹಾರಗಳ ಸಚಿವ ಅಶ್ವಿನಿಕುಮಾರ ಚೌಬೆ ಅವರು, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ಹೊಸ ಬೆಳೆಯ ಆಗಮನದೊಂದಿಗೆ ಟೊಮೆಟೊ ಬೆಲೆಗಳು ಇಳಿಯುವ ಸಾಧ್ಯತೆಯಿದೆ ಎಂದು ರಾಜ್ಯಸಭೆಯಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News