ಪ್ರಾಣಿ ಬಲಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಮುಸ್ಲಿಮರಿಗೆ ಸಲಹೆ ನೀಡಿದ ಜಮೀಯತ್ ಮುಖ್ಯಸ್ಥ
ಹೊಸದಿಲ್ಲಿ: ಬಕ್ರೀದ್ ವೇಳೆ ಪ್ರಾಣಿ ಬಲಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನ ಅರ್ಷದ್ ಮದನಿ ಮುಸ್ಲಿಂ ಸಮುದಾಯವನ್ನು ವಿನಂತಿಸಿದ್ದಾರೆ.
ಪದ್ಧತಿ ಪ್ರಕಾರ ಪ್ರಾಣಿ ಬಲಿ ಒಂದು ಕರ್ತವ್ಯವಾಗಿದ್ದರೂ ಇಸ್ಲಾಂನಲ್ಲಿ ಅದಕ್ಕೆ ಪರ್ಯಾಯವಿಲ್ಲ, ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಸಮುದಾಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.
“ಯಾವ ಪ್ರಾಣಿಗಳ ವಧೆ ನಿಷೇಧಿಸಲಾಗಿದೆಯೋ ಅವುಗಳನ್ನು ಬಲಿ ನೀಡಬಾರದು, ಪ್ರಚಾರ ಮಾಡಬೇಡಿ, ಪ್ರಮುಖವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಂಚಿಕೊಳ್ಳಬೇಡಿ,” ಎಂದು ಮೌಲಾನ ಹೇಳಿದರು.
''ಕುರ್ಬಾನಿ ವೇಳೆ ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಯಾವುದೇ ರೀತಿಯ ತೊಂದರೆ ತಪ್ಪಿಸಲು ಧರ್ಮದಲ್ಲಿ ತಿಳಿಸಿದಂತೆ ನಿಷೇಧಿತ ಪ್ರಾಣಿಗಳ ಬದಲು ಕಪ್ಪು ಪ್ರಾಣಿಯ ಬಲಿ ನೀಡುವುದು ಸುರಕ್ಷಿತ. ಸ್ವಚ್ಛತೆಗೆ ಆದ್ಯತೆ ನೀಡಬೇಕು ಹಾಗೂ ಪ್ರಾಣಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಅವುಗಳನ್ನು ಹೂಳಬೇಕು” ಎಂದು ಅವರು ಹೇಳಿದ್ದಾರೆ.