×
Ad

ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಈಡಿ ಅಧಿಕಾರಿ ಆತ್ಮಹತ್ಯೆ

Update: 2024-08-21 15:12 IST

   ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭ್ರಷ್ಟಾಚಾರ ಪ್ರಕರಣದ ಆರೋಪ ಎದುರಿಸುತ್ತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಅಧಿಕಾರಿಯನ್ನು ಅಲೋಕ್ ಕುಮಾರ್ ಪಂಕಜ್ ಎಂದು ಗುರುತಿಸಲಾಗಿದ್ದು, ಅವರ ಮೃತದೇಹ ಮಂಗಳವಾರ ದಿಲ್ಲಿ ಸಮೀಪದ ಸಾಹಿಬಾಬಾದ್‌ನ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.

ಗಾಝಿಯಾಬಾದ್‌ನ ನಿವಾಸಿಯಾಗಿರುವ ಅಲೋಕ್‌ ಕುಮಾರ್‌, ಹೊಸದಿಲ್ಲಿಯಲ್ಲಿ ಈಡಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಆದಾಯ ತೆರಿಗೆ ಇಲಾಖೆಯಲ್ಲಿಯೂ ಅವರು ಕೆಲಸ ಮಾಡಿದ್ದರು. ಇತ್ತೀಚೆಗೆ, ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಸಿಬಿಐ ಅವರನ್ನು ಎರಡು ಬಾರಿ ವಿಚಾರಣೆಗೆ ಒಳಪಡಿಸಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಿಚಾರಣೆಯನ್ನು ಕೈಬಿಡಲಾಗಿತ್ತು.

ಈಡಿ ಸಹಾಯಕ ನಿರ್ದೇಶಕ ಸಂದೀಪ್ ಸಿಂಗ್ ಅವರನ್ನು ಸಿಬಿಐ ಬಂಧಿಸಿದ ನಂತರ ಲಂಚ ಪ್ರಕರಣದಲ್ಲಿ ಅಲೋಕ್ ಕುಮಾರ್ ಪಂಕಜ್ ಹೆಸರು ಕೇಳಿಬಂದಿತ್ತು. ತನ್ನ ಪುತ್ರನನ್ನು ಬಂಧಿಸದಿರಲು‌ ಸಂದೀಪ್ ಸಿಂಗ್ 50 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ ಎಂದು ವ್ಯಕ್ತಿಯೊಬ್ಬರು ಸಿಬಿಐಗೆ ದೂರು ನೀಡಿದ್ದರು. ಈ ಬಗ್ಗೆ ಕಾರ್ಯಪ್ರವೃತ್ತರಾದ ಸಿಬಿಐ ಅಧಿಕಾರಿಗಳು ದಿಲ್ಲಿಯಲ್ಲಿ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಸಿಂಗ್ ರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು.

ಈ ಹಿಂದೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ಮುಂಬೈನ ಆಭರಣ ವ್ಯಾಪಾರಿಯಿಂದಲೂ ಸಿಂಗ್ ಲಂಚ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದೇ ಪ್ರಕರಣದ ಎಫ್‌ಐಆರ್‌ನಲ್ಲಿ ಸಂದೀಪ್ ಸಿಂಗ್ ಜೊತೆಗೆ ಅಲೋಕ್ ಕುಮಾರ್ ಪಂಕಜ್ ಅವರನ್ನು ಆರೋಪಿ ಎಂದು ಹೆಸರಿಸಲಾಗಿತ್ತು. ಪ್ರಕರಣದ ನಂತರ ಸಂದೀಪ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಪೊಲೀಸರು ಈಡಿ ಅಧಿಕಾರಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಸ್ಥಳಾಂತರಿಸಿದ್ದು, ಆತ್ಮಹತ್ಯೆಗೆ ಕಾರಣವನ್ನು ತಿಳಿಯಲು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News