ಸಾಲ ವಂಚನೆ ಪ್ರಕರಣ : ವಿಚಾರಣೆಗೆ ಹಾಜರಾಗುವಂತೆ ಅನಿಲ್ ಅಂಬಾನಿಗೆ ಈಡಿ ಸಮನ್ಸ್
Photo | PTI
ಮುಂಬೈ : ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಿಲ್ ಅಂಬಾನಿ ಅವರಿಗೆ 17,000 ಕೋಟಿ ರೂ. ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಈಡಿ) ಸಮನ್ಸ್ ಜಾರಿ ಮಾಡಿದೆ.
ಆಗಸ್ಟ್ 5ರಂದು ದಿಲ್ಲಿಯ ಈಡಿ ಪ್ರಧಾನ ಕಚೇರಿಯಲ್ಲಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಅನಿಲ್ ಅಂಬಾನಿಗೆ ಸೂಚಿಸಲಾಗಿದೆ.
ಅನಿಲ್ ಅಂಬಾನಿ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಈಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ, ಕಳೆದ ವಾರ ಅಂಬಾನಿಯ ರಿಲಯನ್ಸ್ ಗ್ರೂಪ್‌ಗೆ ಸಂಬಂಧಿಸಿದ ಮುಂಬೈನ ಸುಮಾರು 35 ಸ್ಥಳಗಳಲ್ಲಿ ಈಡಿ ಅಧಿಕಾರಿಗಳು ಶೋಧ ನಡೆಸಿದ್ದರು.
ಸಂದೇಹಾಸ್ಪದ 3,000 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಹಾಗೂ ಇತರ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿ ಹಲವು ಸ್ಥಳಗಳಲ್ಲಿ ದಾಖಲೆಗಳು ಹಾಗೂ ಕಂಪ್ಯೂಟರ್‌ಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅನಿಲ್ ಅಂಬಾನಿ ಅವರ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ ಹಾಗೂ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಮೇಲೆ ಎಸ್ ಬ್ಯಾಂಕ್ ಬರೊಬ್ಬರಿ 3,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಿತ್ತು. ಆದರೆ, ಸಾಲ ಪಡೆದ ಅನಿಲ್ ಅಂಬಾನಿ ಸಂಸ್ಥೆ ಆ ಹಣವನ್ನು ಅಕ್ರಮವಾಗಿ ಬಳಸಿಕೊಂಡಿದ್ದು, ಬ್ಯಾಂಕ್‌ಗೆ ಮೋಸ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.