×
Ad

ಭಾರತಕ್ಕೆ ತಲುಪಿದ ಇಥಿಯೋಪಿಯಾದ ಜ್ವಾಲಾಮುಖಿ ಬೂದಿ: ವಿಮಾನ ಸಂಚಾರ ವ್ಯತ್ಯಯ

Update: 2025-11-25 07:42 IST

PC: x.com/airnewsalerts

ಹೊಸದಿಲ್ಲಿ: ಇಥಿಯೋಪಿಯಾದಲ್ಲಿ ಸ್ಫೋಟಗೊಂಡ ಜ್ವಾಲಾಮುಖಿಯ ಬೂದಿ ಗಾಳಿಯ ಮೂಲಕ ವಾಯುವ್ಯ ಭಾರತವನ್ನು ತಲುಪಿದ್ದು, ಬೂದಿಯುಕ್ತ ಮಬ್ಬು ವಾತಾವರಣದಿಂದಾಗಿ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ದೆಹಲಿ-ಎನ್‌ಸಿಆರ್ ಮತ್ತು ಪಂಜಾಬ್ ನಲ್ಲಿ ಗೋಚರತೆ ಸಮಸ್ಯೆ ಕಾರಣದಿಂದ ವಿಮಾನ ಸಂಚಾರ ವ್ಯತ್ಯಯಗೊಂಡಿದೆ. ಭಾರತದಲ್ಲಿ ಈ ದಟ್ಟ ಮಬ್ಬು ವಾತಾವರಣ ಪೂರ್ವಾಭಿಮುಖ ಚಲನೆಯಲ್ಲಿದೆ.

ಸುಮಾರು 12 ಸಾವಿರ ವರ್ಷದಲ್ಲಿ ಮೊದಲ ಬಾರಿಗೆ ಚಿಮ್ಮಿದ ಹ್ಯಾಲಿ ಗುಬ್ಬಿ ಜ್ವಾಲಾಮುಖಿಯಿಂದ ಸಿಡಿದ ಬೂದಿ ಎಲ್ಲೆಡೆ ವ್ಯಾಪಿಸುತ್ತಿದ್ದು, 10 ಕಿಲೋಮೀಟರ್ ಎತ್ತರದಲ್ಲಿ ಬೂದಿಯುಕ್ತ ಮೋಡ ಕವಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ಮಾಲಿನ್ಯದಿಂದ ಕಂಗೆಟ್ಟಿರುವ ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ ಈ ಬೂದಿಯುಕ್ತ ಗಾಳಿ ರಾತ್ರಿ 11 ಗಂಟೆ ವೇಳೆ ತಲುಪಿದ್ದು, ಭಾರಿ ತೊಂದರೆಗೀಡಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಭಾರತೀಯ ನಗರಗಳ ಮೇಲೆ ಕೆಲ ಗಂಟೆಗಳ ಕಾಲ ಇದರ ಪರಿಣಾಮ ಇರಲಿದ್ದು, ಪೂರ್ವಾಭಿಮುಖವಾಗಿ ಚಲಿಸುತ್ತಿದೆ ಎಂದು ವಿವರಿಸಿದೆ.

ಹಲವು ವಿಮಾನಗಳ ಸಂಚಾರವನ್ನು ವಿಮುಖಗೊಳಿಸಲಾಗಿದೆ ಅಥವಾ ರದ್ದುಪಡಿಸಲಾಗಿದೆ ಎಂದು ಅಕಾಸಾ ಏರ್ ಮತ್ತು ಇಂಡಿಗೊ ಹೇಳಿವೆ. ಮಸ್ಕತ್ ವಿಮಾನ ಮಾಹಿತಿ ಪ್ರದೇಶದಲ್ಲಿ ಈ ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತದ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಎಲ್ಲ ವಿಮಾನಗಳಿಗೆ ಈ ಸಂಬಂಧ ಸಲಹೆ ಬಿಡುಗಡೆ ಮಾಡಿದ್ದಾರೆ. ಸಂಜೆ 6.30ರ ವೇಳೆಗೆ ರಾಜಸ್ಥಾನದಲ್ಲಿ ಈ ಹೊಗೆಯುಕ್ತ ಮೋಡ ಕಾಣಿಸಿಕೊಂಡಿದ್ದು, 100 ರಿಂದ 120 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ.

ಈ ಹೊಗೆಮೋಡ ಚಲಿಸುತ್ತಿರುವ ಎತ್ತರ ಮತ್ತು ಪ್ರದೇಶದಲ್ಲಿ ವಿಮಾನ ಸಂಚಾರ ಕೈಗೊಳ್ಳದಂತೆ ಡಿಜಿಸಿಎ ಸಲಹೆ ಮಾಡಿದೆ. ಜ್ವಾಲಾಮುಖಿ ಬೂದಿಯ ಸಲಹೆ ಜತೆಗೆ ವಿಮಾನಯಾನಿಗಳಿಗೆ ವಿಶೇಷ ವಿಮಾನಯಾನ ಮುನ್ನೆಚ್ಚರಿಕೆಯನ್ಣೂ ನೀಡಲಾಗಿದೆ. ವಿಮಾನಯಾನ ಸಂಸ್ಥೆಗಳು ಸಿಬ್ಬಂದಿಗೆ ಜ್ವಾಲಾಮುಖಿ ಬೂದಿಗೆ ಸಂಬಂಧಿಸಿದಂತೆ ಕಾರ್ಯಾಚರಣೆಯ ಮಾರ್ಗಸೂಚಿ ನೀಡಬೇಕು ಹಾಗೂ ಸೂಕ್ತ ವಿಧಿವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News