×
Ad

ಕರ್ನಲ್ ಸೋಫಿಯಾ ಕುರೇಶಿ ವಿರುದ್ಧದ ಹೇಳಿಕೆಗೆ ಎಫ್‌ಐಆರ್: ಸುಪ್ರೀಂಕೋರ್ಟ್ ಮೊರೆ ಹೋದ ಮಧ್ಯಪ್ರದೇಶ ಸಚಿವ

Update: 2025-05-15 11:21 IST

ಮಧ್ಯಪ್ರದೇಶದ ಸಚಿವ ಕನ್ವರ್ ವಿಜಯ್ ಶಾ ಮತ್ತು ಕರ್ನಲ್ ಸೋಫಿಯಾ ಖುರೇಷಿ | (Photo : PTI, X/@KrVijayShah)

ಹೊಸದಿಲ್ಲಿ: ಭಾರತೀಯ ಸೇನೆಯ ಯೋಧೆ ಕರ್ನಲ್ ಸೋಫಿಯಾ ಕುರೇಶಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಮಧ್ಯಪ್ರದೇಶ ಸಚಿವ ಕುನ್ವರ್ ವಿಜಯ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಮೇ 14ರಂದು ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅವರು ಗುರುವಾರ ಸುಪ್ರೀಂ‌ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

ವೈರತ್ವ ಹಾಗೂ ದ್ವೇಷವನ್ನು ಬೆಳೆಸುವಂತಹ ಹೇಳಿಕೆ ನೀಡಿದ ಆರೋಪದ ಮೇಲೆ ಸ್ವಯಂಪ್ರೇರಿತ ವಿಚಾರಣೆ ನಡೆಸಿ, ತನ್ನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್‌ಗೆ ವಿಶೇಷ ರಜಾಕಾಲದ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

ಮೇ 12ರಂದು ಇಂದೋರ್ ಬಳಿ ನಡೆದಿದ್ದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಸಚಿವ ಕುನ್ವರ್ ವಿಜಯ್ ಶಾ, ಭಾರತೀಯ ಸೇನೆಯ ಯೋಧೆ ಕರ್ನಲ್ ಸೋಫಿಯಾ ಕುರೇಶಿಯನ್ನು ʼಭಯೋತ್ಪಾದಕರ ಸಹೋದರಿʼ ಎಂದು ಹೇಳಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳ ವಿರುದ್ಧ ಭಾರತೀಯ ಸೇನಾ ಪಡೆ ನಡೆಸಿದ 'ಆಪರೇಷನ್ ಸಿಂಧೂರ್'ಗೆ ಸಂಬಂಧಿಸಿದ ಮಾಧ್ಯಮ ವಿವರಣೆ ಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಕರ್ನಲ್ ಸೋಫಿಯಾ ಕುರೇಶಿ ದೇಶಾದ್ಯಂತ ಸುದ್ದಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News