×
Ad

ಲಕ್ನೋ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿಗೆ ಬೆದರಿಕೆ: ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು

Update: 2025-06-10 12:59 IST

ಹೊಸದಿಲ್ಲಿ: ಲಕ್ನೋ ವಿವಿಯ ದಲಿತ ಸಮುದಾಯಕ್ಕೆ ಸೇರಿದ ಸಂಶೋಧನಾ ವಿದ್ಯಾರ್ಥಿಯೋರ್ವರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಅವರ ನಿಕಟವರ್ತಿ ಬಿಜೆಪಿ ನಾಯಕ ಅಲೋಕ್ ಸಿಂಗ್ ವಿರುದ್ಧ ಉತ್ತರ ಪ್ರದೇಶದ ಬಲ್ಲಿಯಾದಲ್ಲಿರುವ ಉಭಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ನಾಯಕ ಅಲೋಕ್ ಸಿಂಗ್ ಮೇ 21ರಂದು ನನಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಸಂಶೋಧನಾ ವಿದ್ಯಾರ್ಥಿ ದೀಪಕ್ ಕನ್ನೌಜಿಯಾ ದೂರು ನೀಡಿದ್ದಾರೆ. ದೀಪಕ್ ತುರ್ತಿಪರ್ ಗ್ರಾಮದ ನಿವಾಸಿಯಾಗಿದ್ದಾರೆ.

ʼನೀವು ಬೇಕಿದ್ದರೆ ಈ ಸಂಭಾಷಣೆಯನ್ನು ರೆಕಾರ್ಡ್ ಮಾಡಿ, ನಾನು ಉತ್ತರಪ್ರದೇಶ ಸರಕಾರಕ್ಕೆ ಮತ್ತು ಯಾವುದೇ ಕಾನೂನಿಗೆ ಹೆದರುವುದಿಲ್ಲ ಎಂದು ಅಲೋಕ್ ಸಿಂಗ್ ಹೇಳಿದ್ದಾನೆ. ಆತ ನಮಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ. ಇದರಿಂದಾಗಿಯೇ ನನ್ನ ತಂದೆ ಕಮಲೇಶ್ ಕನ್ನೌಜಿಯಾ ಕಳೆದ ಅಕ್ಟೋಬರ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಈಗ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುವ ನನ್ನ ತಾಯಿಯ ಸುರಕ್ಷತೆಯ ಬಗ್ಗೆ ನನಗೆ ಭಯವಿದೆʼ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಿಜೆಪಿಯ ಸ್ಥಳೀಯ ಘಟಕದ ಅಧ್ಯಕ್ಷ ಅರುಣ್ ಕಾಂತ್ ತಿವಾರಿ ಈ ಕುರಿತು ಪ್ರತಿಕ್ರಿಯಿಸಿ, ಅಲೋಕ್ ಸಿಂಗ್ ಬಿಜೆಪಿ ಪಕ್ಷದ ಕಾರ್ಯಕರ್ತ ಮತ್ತು ನೀರಜ್ ಶೇಖರ್ ಅವರ ನಿಕಟವರ್ತಿ ಎಂಬುದನ್ನು ದೃಢಪಡಿಸಿದ್ದಾರೆ.

ದಲಿತ ವಿದ್ಯಾರ್ಥಿಗೆ ಬೆದರಿಕೆ ಆರೋಪದಲ್ಲಿ ಅಲೋಕ್ ಸಿಂಗ್ ವಿರುದ್ಧ ಬಿಎನ್ಎಸ್ ಸೆಕ್ಷನ್ 352 ಮತ್ತು 351(3)ರ ಅಡಿಯಲ್ಲಿ ಉದ್ದೇಶಪೂರ್ವಕ ಅವಮಾನ, ಕ್ರಿಮಿನಲ್ ಬೆದರಿಕೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News