Delhi| ಮಸೀದಿ ಬಳಿ ತೆರವು ಕಾರ್ಯಾಚರಣೆ: ಪೊಲೀಸರ ಮೇಲೆ ಕಲ್ಲು ತೂರಾಟ, ಅಶ್ರುವಾಯು ಪ್ರಯೋಗ
Photo| NDTV
ಹೊಸದಿಲ್ಲಿ: ಹಳೆ ದಿಲ್ಲಿಯಲ್ಲಿ ಮಸೀದಿಯ ಬಳಿ ಅತಿಕ್ರಮಣ ತೆರವುಗೊಳಿಸಲು ಬುಧವಾರ ಮುಂಜಾನೆ ನಡೆಸಲಾಗುತ್ತಿದ್ದ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, ಕೆಲಕಾಲ ಉದ್ವಿಗ್ನತೆ ಉಂಟಾಯಿತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿಲ್ಲಿ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕಾರ್ಯಾಚರಣೆ ಆರಂಭಿಸಲಾಯಿತು. ತುರ್ಕಮನ್ ಗೇಟ್ ಪ್ರದೇಶದ ಫೈಝ್-ಎ-ಇಲಾಹಿ ಮಸೀದಿಯ ಬಳಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ನಾಲ್ಕರಿಂದ ಐದು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅತಿಕ್ರಮಣ ವಿರೋಧಿ ಕ್ರಮದ ಭಾಗವಾಗಿ 17 ಬುಲ್ಡೋಝರ್‌ಗಳನ್ನು ನಿಯೋಜಿಸಲಾಗಿದೆ. ರಾಮಲೀಲಾ ಮೈದಾನದಲ್ಲಿರುವ ಮಸೀದಿ ಹಾಗೂ ಸ್ಮಶಾನಕ್ಕೆ ಹೊಂದಿಕೊಂಡಿರುವ ಭೂಮಿಯಿಂದ ಅತಿಕ್ರಮಣಗಳನ್ನು ತೆರವುಗೊಳಿಸುವ ಎಂಸಿಡಿ ನಿರ್ಧಾರವನ್ನು ಪ್ರಶ್ನಿಸಿ, ಸೈಯದ್ ಇಲಾಹಿ ಮಸೀದಿಯ ವ್ಯವಸ್ಥಾಪನಾ ಸಮಿತಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ದಿಲ್ಲಿ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದ್ದರೂ ತೆರವು ಕಾರ್ಯ ಮುಂದುವರಿದಿದೆ.
ತೆರವು ಕಾರ್ಯಾಚರಣೆಗೆ ವಿರೋಧವಾಗಿ ಸ್ಥಳೀಯ ನಿವಾಸಿಗಳು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ನಿಯಂತ್ರಣ ತಪ್ಪದಂತೆ ತಡೆಯಲು ಪ್ರದೇಶದಲ್ಲಿ ಹಾಗೂ ಸುತ್ತಮುತ್ತ ಸಾಕಷ್ಟು ಪೊಲೀಸ್ ಬಲವನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಅತಿಕ್ರಮಣ ತೆರವು ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಎಂಸಿಡಿ ತೆರವು ಕಾರ್ಯ ನಡೆಸುತ್ತಿದೆ. ಭದ್ರತೆಗಾಗಿ ನಾವು ನಮ್ಮ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಕಾರ್ಯಾಚರಣೆ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಆರಂಭವಾಯಿತು. ಹೈಕೋರ್ಟ್ ಆದೇಶದಂತೆ ಅತಿಕ್ರಮಿತ ಭೂಮಿಯಲ್ಲಿ ಎಂಸಿಡಿ ತೆರವು ಕಾರ್ಯ ನಡೆಸಿದೆ. ರಾತ್ರಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಜನರನ್ನು ತಡೆಯಲು ಬಲವನ್ನು ಬಳಸಲಾಗಿದೆ,” ಎಂದು ಪೊಲೀಸ್ ಅಧಿಕಾರಿ ವಲ್ಸನ್ ಹೇಳಿದ್ದಾರೆ.
“ಒಟ್ಟಾರೆ ಪ್ರಕ್ರಿಯೆ ಸುಗಮವಾಗಿತ್ತು. ನಾಲ್ಕರಿಂದ ಐದು ಅಧಿಕಾರಿಗಳಿಗೆ ಸಣ್ಣ ಗಾಯಗಳಾಗಿವೆ. ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಹಾಗೂ ಬಾಡಿ ಕ್ಯಾಮೆರಾ ದೃಶ್ಯಗಳು ಲಭ್ಯವಾದ ನಂತರ ದುಷ್ಕರ್ಮಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಹೇಳಿದರು.
ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟದ ಮೂಲಕ ಕಾರ್ಯಾಚರಣೆಗೆ ಅಡ್ಡಿಪಡಿಸಲು ಯತ್ನಿಸಿದ್ದಾರೆ ಎಂದು ಕೇಂದ್ರ ವಲಯದ ಜಂಟಿ ಪೊಲೀಸ್ ಆಯುಕ್ತ ಮಧುರ್ ವರ್ಮಾ ತಿಳಿಸಿದ್ದಾರೆ. “ಕನಿಷ್ಠ ಬಲಪ್ರಯೋಗದೊಂದಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಯಾವುದೇ ಉಲ್ಬಣಗೊಳ್ಳದೆ ಸಾಮಾನ್ಯ ಸ್ಥಿತಿಗೆ ಮರಳುವಂತೆ ಖಚಿತಪಡಿಸಲಾಗಿದೆ,” ಎಂದು ಹೇಳಿದರು.
ತೆರವು ಕಾರ್ಯಾಚರಣೆ ಸುಗಮವಾಗಿ ನಡೆಯಲು ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ. “ಇಡೀ ಪ್ರದೇಶವನ್ನು 9 ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದನ್ನು ಹೆಚ್ಚುವರಿ ಉಪ ಪೊಲೀಸ್ ಆಯುಕ್ತರ ಮೇಲ್ವಿಚಾರಣೆಗೆ ಒಪ್ಪಿಸಲಾಗಿದೆ. ಎಲ್ಲ ಸೂಕ್ಷ್ಮ ಸ್ಥಳಗಳಲ್ಲಿ ಸಮರ್ಪಕ ಪೊಲೀಸ್ ನಿಯೋಜನೆ ಮಾಡಲಾಗಿದೆ,” ಎಂದು ವರ್ಮಾ ವಿವರಿಸಿದರು.
ಶಾಂತಿಯನ್ನು ಕಾಪಾಡಿಕೊಳ್ಳಲು ಹಾಗೂ ಯಾವುದೇ ಅಹಿತಕರ ಘಟನೆ ತಡೆಯಲು ಕಾರ್ಯಾಚರಣೆಗೆ ಮುನ್ನ ಸ್ಥಳೀಯರೊಂದಿಗೆ ಹಲವು ಸಮನ್ವಯ ಸಭೆಗಳನ್ನು ನಡೆಸಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.