×
Ad

ವಂಚನೆ ಪ್ರಕರಣದಲ್ಲಿ ದೋಷಿಯಾಗಿದ್ದ RJDಯ ಮಾಜಿ ಶಾಸಕ ಅನಿಲ್ ಸಹಾನಿ ಬಿಜೆಪಿ ಸೇರ್ಪಡೆ

Update: 2025-10-22 22:51 IST

Photo: National Herald

ಪಟ್ನಾ, ಅ.22: ವಂಚನೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯದಿಂದ ದೋಷಿ ಎಂದು ಸಾಬೀತಾಗಿ ಶಾಸಕ ಸ್ಥಾನ ಕಳೆದುಕೊಂಡಿದ್ದ ರಾಷ್ಟ್ರೀಯ ಜನತಾ ದಳ(RJD)ದ ಮಾಜಿ ಶಾಸಕ ಅನಿಲ್ ಸಹಾನಿ ಬುಧವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ (BJP) ಸೇರಿದ್ದಾರೆ.

ಬಿಹಾರದ ಬಿಜೆಪಿ ಚುನಾವಣಾ ಉಸ್ತುವಾರಿಯೂ ಆಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸಮ್ಮುಖದಲ್ಲಿ ಸಹಾನಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಈ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸೇರಿದಂತೆ ಅನೇಕ ಪ್ರಮುಖ ನಾಯಕರು ಉಪಸ್ಥಿತರಿದ್ದರು.

2012ರಲ್ಲಿ ರಾಜ್ಯಸಭೆಯಲ್ಲಿ ಆರ್‌ಜೆಡಿ ನಾಯಕನಾಗಿದ್ದ ಅವಧಿಯಲ್ಲಿ ಪ್ರಯಾಣ ಮಾಡದಿದ್ದರೂ, ರಜೆ ಪ್ರಯಾಣ ರಿಯಾಯಿತಿ ಪಡೆಯಲು ನಕಲಿ ವಿಮಾನ ಟಿಕೆಟ್ ಸಲ್ಲಿಸಿದ್ದಕ್ಕಾಗಿ ಸಿಬಿಐ ಕೋರ್ಟ್ ಸಹಾನಿ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲಿ ಅವರು ಕಳೆದ ವರ್ಷ ಶಾಸಕರಾಗಿ ಅನರ್ಹರಾಗಿದ್ದರು.

2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕುರ್ಹಾನಿ ಕ್ಷೇತ್ರದಿಂದ ಸಹಾನಿ ಬಿಜೆಪಿ ಅಭ್ಯರ್ಥಿ ಕೇದರ್ ಗುಪ್ತಾ ವಿರುದ್ಧ ಕೇವಲ 900 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಅನರ್ಹತೆ ಬಳಿಕ ನಡೆದ ಉಪಚುನಾವಣೆಯಲ್ಲಿ ಗುಪ್ತಾ ಗೆಲುವು ಸಾಧಿಸಿ ನಂತರ ರಾಜ್ಯ ಸಚಿವರಾಗಿದ್ದರು.

ಮುಜಾಫರ್‌ಪುರ ಜಿಲ್ಲೆಯ ಪ್ರಮುಖ ಹಿಂದುಳಿದ ವರ್ಗವಾದ ‘ನಿಶಾದ್’ ಸಮುದಾಯದ ಮತದಾರರನ್ನು ಸೆಳೆಯುವ ಉದ್ದೇಶದಿಂದ ಸಹಾನಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News