×
Ad

ಗೋವಾ ನೈಟ್‍ಕ್ಲಬ್‍ನಲ್ಲಿ ಬೆಂಕಿ ಆಕಸ್ಮಿಕ : 23 ಮಂದಿ ಸಜೀವ ದಹನ

Update: 2025-12-07 07:16 IST

ಸಾಂದರ್ಭಿಕ ಚಿತ್ರ

ಪಣಜಿ: ಗೋವಾದ ಬಿರ್ಚ್ ಬೈ ರೆಮೆಯೊ ಲೇನ್ ಕ್ಲಬ್‌ ನಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ ಕನಿಷ್ಠ 23 ಮಂದಿ ಸಜೀವ ದಹನವಾಗಿದ್ದಾರೆ.

ಸುಟ್ಟುಗಾಯಗಳು ಮತ್ತು ಉಸಿರುಗಟ್ಟಿ 23 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ದೃಢಪಡಿಸಿದ್ದಾರೆ.

ಉತ್ತರ ಗೋವಾದ ಅರ್ಪೋರಾ ಪ್ರದೇಶದಲ್ಲಿದ್ದ ಕ್ಲಬ್‍ನಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ತನಿಖೆ ಕೈಗೊಳ್ಳುವಂತೆ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಆದೇಶಿಸಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಪೊಲೀಸರು ಎಲ್ಲ ಮೃತದೇಹಗಳನ್ನು ಪತ್ತೆ ಮಾಡಿದ್ದು, ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗೋವಾದ ಎಲ್ಲ ಸಂಸ್ಥೆಗಳಲ್ಲಿ ಸುರಕ್ಷತಾ ಪರಿಶೋಧನೆ ನಡೆಸುವ ತುರ್ತ ಅಗತ್ಯತೆಯನ್ನು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ದುರಂತವನ್ನು ತೀರಾ ಕಳವಳಕಾರಿ ಎಂದು ಬಣ್ಣಿಸಿರುವ ಬಿಜೆಪಿ ಶಾಸಕ ಮೈಕೆಲ್ ಲೋಬೊ ಅವರು, "ಗೋವಾದ ಎಲ್ಲ ಕ್ಲಬ್‍ಗಳಲ್ಲಿ ಸುರಕ್ಷಾ ಪರಿಶೋಧನೆ ಕೈಗೊಳ್ಳುವ ಅಗತ್ಯತೆ ಇದೆ" ಎಂದು ಹೇಳಿದ್ದಾರೆ.

"ಈ ಘಟನೆಯಿಂದ ತೀರಾ ಆಘಾತವಾಗಿದೆ. ಮೂವರು ಮಹಿಳೆಯರು ಸೇರಿದಂತೆ 23 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ ಕೆಲವರು ಪ್ರವಾಸಿಗಳಾದರೆ ಬಹುತೇಕ ಮಂದಿ ರೆಸ್ಟೋರೆಂಟ್‍ನ ಬೇಸ್‍ಮೆಂಟ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸ್ಥಳೀಯ ಉದ್ಯೋಗಿಗಳು" ಎಂದು ಅವರು ವಿವರ ನೀಡಿದ್ದಾರೆ.

ಗೋವಾ ಅತ್ಯಂತ ಸುರಕ್ಷಿತ ತಾಣ ಎನ್ನುವುದು ಪ್ರವಾಸಿಗಳ ಭಾವನೆ. ಆದರೆ ಈ ಅಗ್ನಿ ಆಕಸ್ಮಿಕ ತೀರಾ ಕಳವಳಕಾರಿ. ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸಬಾರದು. ಪ್ರವಾಸಿಗಳು ಮತ್ತು ಕಾರ್ಮಿಕರ ಸುರಕ್ಷತೆ ತೀರಾ ಮಹತ್ವದ್ದು. ಬಹುತೇಕ ಮಂದಿ ಬೇಸ್‍ಮೆಂಟ್‍ನಲ್ಲಿ ಉಸಿರಗಟ್ಟಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News