ಭಾರತ ಸರ್ಕಾರ, ಔಷಧ ಕಂಪನಿ, ಆಮದುದಾರನ ವಿರುದ್ಧ ದಾವೆ ಹೂಡಿ: ಗಾಂಬಿಯಾ ಅಧ್ಯಕ್ಷೀಯ ಕಾರ್ಯಪಡೆ ಶಿಫಾರಸು
ಸಾಂದರ್ಭಿಕ ಚಿತ್ರ | Photo: PTI
ಹೊಸ ದಿಲ್ಲಿ: ಕಳೆದ ವರ್ಷ ಕಲಬೆರಕೆಯ ಸಿರಪ್ ಸೇವನೆಯಿಂದ ಮಕ್ಕಳಲ್ಲಿ ಮೂತ್ರಪಿಂಡ ಹಾನಿಯಾಗಿ, ಅದರಿಂದ ದೇಶಾದ್ಯಂತ 70 ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ದೇಶವು ಭಾರತೀಯ ಸರ್ಕಾರದ ವಿರುದ್ಧ ದಾವೆ ಹೂಡಬೇಕು ಎಂದು ಗಾಂಬಿಯಾ ಅಧ್ಯಕ್ಷ ಅಡಾಮ ಬಾರೊ ರಚಿಸಿದ್ದ ಕಾರ್ಯಪಡೆಯು ಅವರಿಗೆ ಶಿಫಾರಸು ಮಾಡಿದೆ. ಮೃತಪಟ್ಟ ಮಕ್ಕಳ ಪೈಕಿ ಬಹುತೇಕರು ಎರಡು ವರ್ಷಕ್ಕಿಂತ ಕಿರಿಯರಾಗಿದ್ದರು ಎಂದು thewire.in ವರದಿ ಮಾಡಿದೆ.
ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ತನಿಖೆ ಕೈಗೊಂಡಿದ್ದ ಕಾರ್ಯಪಡೆಯು, ಈ ವರ್ಷದ ಮಾರ್ಚ್ ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಜುಲೈ 21ರಂದು ಈ ವರದಿಯನ್ನು ಬಿಡುಗಡೆ ಮಾಡಿರುವ ಗಾಂಬಿಯಾ ಸರ್ಕಾರ, ಸಮಿತಿಯ ಶಿಫಾರಸಿನ ಕುರಿತು ತನ್ನ ಹೇಳಿಕೆಯನ್ನು ಪ್ರಕಟಿಸಿತ್ತು. ಕಾರ್ಯಪಡೆಯ ವರದಿ ಹಾಗೂ ಸರ್ಕಾರದ ಹೇಳಿಕೆಗಳೆರಡರ ಪ್ರತಿಯೂ ತನಗೆ ಲಭ್ಯವಾಗಿದೆ ಎಂದು The Wire ಸುದ್ದಿ ಸಂಸ್ಥೆ ವರದಿ ಮಾಡಿದೆ.
"ನ್ಯಾಯ ಸಚಿವಾಲಯದ ಮೂಲಕ ಗ್ಯಾಂಬಿಯಾ ಸರ್ಕಾರವು ಅಟ್ಲಾಂಟಿಕ್ ಫಾರ್ಮಾಸ್ಯೂಟಿಕಲ್ಸ್ (ಆಮದು ಕಂಪನಿ), ಮೇಡನ್ ಫಾರ್ಮಾಸ್ಯೂಟಿಕಲ್ಸ್ (ಭಾರತೀಯ ತಯಾರಿಕಾ ಕಂಪನಿ) ಹಾಗೂ ಭಾರತ ಸರ್ಕಾರದಿಂದ ತೀವ್ರ ಮೂತ್ರಪಿಂಡ ಹಾನಿಯಿಂದ ಸಂತ್ರಸ್ತರಾದ ಮಕ್ಕಳ ಕುಟುಂಬಗಳ ಪರವಾಗಿ ಪರಿಹಾರ ಪಡೆಯಲು ಕಾನೂನು ಕ್ರಮ ಸಾಧ್ಯತೆಯನ್ನು ಅನ್ವೇಷಿಸಬೇಕು" ಎಂದು ಕಾರ್ಯಪಡೆ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
ಭಾರತೀಯ ಮೂಲದ ಔಷಧ ತಯಾರಿಕಾ ಕಂಪನಿಯಾದ ಮೇಡನ್ ಫಾರ್ಮಾಸ್ಯೂಟಿಕಲ್ಸ್ ಹಾಗೂ ಭಾರತೀಯ ತಯಾರಿಕಾ ಕಂಪನಿಯಿಂದ ಗ್ಯಾಂಬಿಯಾಗೆ ಔಷಧಗಳನ್ನು ತರಿಸಿಕೊಂಡ ಅಮೆರಿಕಾ ಮೂಲದ ಆಮದು ಕಂಪನಿಯಾದ ಅಟ್ಲಾಂಟಿಕ್ ಫಾರ್ಮಾಸ್ಯೂಟಿಕಲ್ಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಶಿಫಾರಸನ್ನು ಗಾಂಬಿಯಾ ಸರ್ಕಾರ ಅಂಗೀಕರಿಸಿದ್ದು, ಈ ಸಂಬಂಧ ಕಾನೂನು ಸಲಹೆಗಾಗಿ "ಉನ್ನತ ಮಟ್ಟದ ಕಾನೂನು ಸಂಸ್ಥೆ"ಯೊಂದಿಗೆ ವ್ಯವಹರಿಸಲಾಗುತ್ತಿದೆ ಎಂದು ತಿಳಿಸಿದೆ. ಹೀಗಿದ್ದೂ, ಈ ಹೇಳಿಕೆಯಲ್ಲಿ ಭಾರತ ಸರ್ಕಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಏನನ್ನೂ ಹೇಳಲಾಗಿಲ್ಲ. ಗ್ಯಾಂಬಿಯಾ ಸರ್ಕಾರವು ತನ್ನ ಭಾರತೀಯ ಪ್ರತಿನಿಧಿಯೊಂದಿಗೆ ಮಾತುಕತೆ ನಡೆಸಲಿದೆ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.