ತನಗೆ ಅನುಕೂಲವಲ್ಲದ ದತ್ತಾಂಶಗಳನ್ನು ಒದಗಿಸಿದ ಐಐಪಿಎಸ್ ನಿರ್ದೇಶಕರನ್ನು ಅಮಾನತುಗೊಳಿಸಿದ ಕೇಂದ್ರ ಸರಕಾರ: ವರದಿ
ಅಭೂತಪೂರ್ವ ಕ್ರಮವೊಂದರಲ್ಲಿ ಕೇಂದ್ರ ಸರಕಾರವು ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆ (ಐಐಪಿಎಸ್)ಯ ನಿರ್ದೇಶಕ ಕೆ.ಎಸ್.ಜೇಮ್ಸ್ ಅವರನ್ನು ನೇಮಕಾತಿಯಲ್ಲಿ ಅಕ್ರಮವನ್ನು ಉಲ್ಲೇಖಿಸಿ ಕರ್ತವ್ಯದಿಂದ ಅಮಾನತುಗೊಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಜಾಲತಾಣ The Wire ವರದಿ ಮಾಡಿದೆ.
ಕೆ.ಎಸ್.ಜೇಮ್ಸ್ (Photo: iipsindia.ac.in)
ಹೊಸದಿಲ್ಲಿ: ಅಭೂತಪೂರ್ವ ಕ್ರಮವೊಂದರಲ್ಲಿ ಕೇಂದ್ರ ಸರಕಾರವು ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆ (ಐಐಪಿಎಸ್)ಯ ನಿರ್ದೇಶಕ ಕೆ.ಎಸ್.ಜೇಮ್ಸ್ ಅವರನ್ನು ನೇಮಕಾತಿಯಲ್ಲಿ ಅಕ್ರಮವನ್ನು ಉಲ್ಲೇಖಿಸಿ ಕರ್ತವ್ಯದಿಂದ ಅಮಾನತುಗೊಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಜಾಲತಾಣ The Wire ವರದಿ ಮಾಡಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಐಐಪಿಎಸ್ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್)ಗಳನ್ನು ನಡೆಸುತ್ತದೆ ಮತ್ತು ಸರಕಾರದ ಪರವಾಗಿ ಇಂತಹ ಇತರ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ.
ಅಮಾನತು ಆದೇಶವನ್ನು ಹೊರಡಿಸಿರುವುದನ್ನು ದೃಢ ಪಡಿಸಿರುವ ಐಐಪಿಎಸ್ ಮೂಲವೊಂದು, ಹೆಚ್ಚಿನ ವಿವರಗಳು ಸೋಮವಾರ ಹೊರಬರಲಿವೆ ಎಂದು ತಿಳಿಸಿದೆ.
ಐಐಪಿಎಸ್ ನಡೆಸಿದ್ದ ಸಮೀಕ್ಷೆಗಳಲ್ಲಿಯ ಕೆಲವು ದತ್ತಾಂಶಗಳಿಂದ ಅಸಮಾಧಾನಗೊಂಡಿದ್ದ ಸರಕಾರವು ರಾಜೀನಾಮೆ ನೀಡುವಂತೆ ಈ ಹಿಂದೆ ಜೇಮ್ಸ್ ಅವರಿಗೆ ಸೂಚಿಸಿತ್ತು. ಆದರೆ ಸರಕಾರವು ಉಲ್ಲೇಖಿಸಿದ್ದ ಕಾರಣಗಳಿಗಾಗಿ ರಾಜೀನಾಮೆ ನೀಡಲು ಅವರು ಹಿಂದೇಟು ಹಾಕಿದ್ದರು ಎಂದು ಮೂಲಗಳು ತಿಳಿಸಿದವು. ಅಮಾನತು ಆದೇಶವನ್ನು ಜು.28ರಂದು ಸಂಜೆ ಜೇಮ್ಸ್ ಅವರಿಗೆ ಕಳುಹಿಸಲಾಗಿದೆ.
ಅನನುಕೂಲಕರ ಡೇಟಾ?
ಎನ್ಎಫ್ಎಚ್ಎಸ್-5 ಚುನಾವಣೆಗಳಲ್ಲಿ ಗೆಲ್ಲಲು ತನ್ನ ರಾಜಕೀಯ ಅಭಿಯಾನಕ್ಕೆ ಅನುಕೂಲಕರ ಬಲವಾದ ಮತ್ತು ‘ಧನಾತ್ಮಕ ’ದತ್ತಾಂಶಗಳನ್ನು ನಂಬುವ ಸರಕಾರಕ್ಕೆ ಅಹಿತಕರವಾದ ಹಲವು ಡೇಟಾ ಸೆಟ್ಗಳನ್ನು ಒದಗಿಸಿತ್ತು.
ಉದಾಹರಣೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಈ ಸರಕಾರವು ಭಾರತವು ಬಯಲುಶೌಚ ಮುಕ್ತವಾಗಿದೆ ಎಂದು ಆಗಾಗ್ಗೆ ಕೊಚ್ಚಿಕೊಳ್ಳುತ್ತಿರುತ್ತದೆ. ಆದರೆ ವಾಸ್ತವದಲ್ಲಿ ಭಾರತವು ಈ ಸಾಧನೆಯ ಸಮೀಪದಲ್ಲೂ ಇಲ್ಲ ಎನ್ನುವುದನ್ನು ಎನ್ಎಫ್ಎಚ್ಎಸ್-5ರ ಡೇಟಾ ತೋರಿಸಿದೆ. ಶೇ.19ರಷ್ಟು ಕುಟುಂಬಗಳು ಯಾವುದೇ ಶೌಚಾಲಯ ಸೌಲಭ್ಯವನ್ನು ಹೊಂದಿಲ್ಲ, ಅವು ಬಯಲುಶೌಚ ಪದ್ಧತಿಯನ್ನೇ ಅವಲಂಬಿಸಿವೆ ಎನ್ನುವುದನ್ನು ಅದು ಬೆಟ್ಟು ಮಾಡಿದೆ. ಲಕ್ಷದ್ವೀಪವನ್ನು ಹೊರತುಪಡಿಸಿದರೆ ಶೇ.100ರಷ್ಟು ಜನಸಂಖ್ಯೆಯು ಶೌಚಾಲಯ ಸೌಲಭ್ಯವನ್ನು ಹೊಂದಿರುವ ಒಂದೇ ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವಿಲ್ಲ ಎಂದು ಅದು ಹೇಳಿದೆ.
ಶೇ.40ಕ್ಕೂ ಅಧಿಕ ಕುಟುಂಬಗಳಿಗೆ ಶುದ್ಧ ಅಡುಗೆ ಇಂಧನ ಲಭ್ಯವಿಲ್ಲ ಎಂದೂ ತೋರಿಸಿರುವ ಡೇಟಾ, ತನ್ಮೂಲಕ ಉಜ್ವಲ ಯೋಜನೆಯು ಯಶಸ್ವಿಯಾಗಿದೆ ಎಂಬ ಹೇಳಿಕೆಗಳನ್ನು ಪ್ರಶ್ನಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅರ್ಧಕ್ಕೂ ಹೆಚ್ಚಿನ (ಶೇ.57) ಜನಸಂಖ್ಯೆಯು ಎಲ್ಪಿಜಿ ಅಥವಾ ನೈಸರ್ಗಿಕ ಅನಿಲದಿಂದ ವಂಚಿತವಾಗಿವೆ ಎಂದು ಅದು ಹೇಳಿದೆ.
ಭಾರತದಲ್ಲಿ ರಕ್ತಹೀನತೆಯು ಹೆಚ್ಚುತ್ತಿದೆ ಎಂದೂ ಎನ್ಎಫ್ಎಚ್ಎಸ್-5 ಹೇಳಿದೆ ಮತ್ತು ಎನ್ಎಫ್ಎಚ್ಎಸ್-6ರಲ್ಲಿ ರಕ್ತಹೀನತೆ ಕುರಿತು ಸಮೀಕ್ಷೆಯನ್ನೇ ಕೈಬಿಡಲು ಸರಕಾರವು ಚಿಂತಿಸುತ್ತಿದೆ ಎಂದು ಇತ್ತೀಚಿನ ಕೆಲವು ವರದಿಗಳು ಹೇಳಿವೆ.
ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯೆ ಶಮಿಕಾ ರವಿ ಅವರು ಇತ್ತೀಚಿಗೆ ‘ಇಂಡಿಯನ್ ಎಕ್ಸ್ಪ್ರೆಸ್’ನಲ್ಲಿ ಬರೆದಿದ್ದ ಲೇಖನದಲ್ಲಿ ಎನ್ಎಫ್ಎಚ್ಎಸ್ ಮತ್ತು ಅಂತಹ ಇತರ ಸಮೀಕ್ಷೆಗಳ ದತ್ತಾಂಶ ಸಂಗ್ರಹ ದೋಷಪೂರಿತವಾಗಿದೆ ಎಂದು ಪ್ರತಿಪಾದಿಸಿದ್ದರು. ಅದೇ ಪತ್ರಿಕೆಯಲ್ಲಿ ಅಮಿತಾಬ್ ಕುಂಡು ಮತ್ತು ಪಿ.ಸಿ.ಮೋಹನನ್ ಅವರು ಬರೆದಿದ್ದ ಇನ್ನೊಂದು ಲೇಖನವು ಶಮಿಕಾ ರವಿಯವರ ಲೇಖನವನ್ನು ಟೀಕಿಸಿತ್ತು.
ಡೇಟಾ ಮತ್ತು ಕೇಂದ್ರ ಸರಕಾರ ಕುರಿತು ಗಂಭೀರ ಪ್ರಶ್ನೆಗಳು
ದತ್ತಾಂಶಗಳೊಂದಿಗೆ ತನ್ನ ಅತ್ಯಂತ ಅಹಿತಕರ ಸಂಬಂಧದಿಂದಾಗಿ ಕೇಂದ್ರ ಸರಕಾರವು ಆಗಾಗ್ಗೆ ಸುದ್ದಿಯಾಗುತ್ತಿರುತ್ತದೆ.
ಸರಕಾರವು ತನ್ನ ಮೊದಲ ಅಧಿಕಾರಾವಧಿಯಲ್ಲಿ ತನ್ನದೇ ಆದ ಬಳಕೆ ವೆಚ್ಚ ಸಮೀಕ್ಷೆಯನ್ನು ಕಸದ ಬುಟ್ಟಿಗೆಸೆದಿದ್ದು ಟೀಕೆಗಳಿಗೆ ಕಾರಣವಾಗಿತ್ತು ಮತ್ತು ಅಚ್ಚರಿಯನ್ನು ಮೂಡಿಸಿತ್ತು. 2019,ಜನವರಿಯಲ್ಲಿ ನಿರುದ್ಯೋಗ ಡೇಟಾವನ್ನು ತಡೆಹಿಡಿದಿದ್ದ ಸರಕಾರವು ಸಾರ್ವತ್ರಿಕ ಚುನಾವಣೆಗಳು ಮುಗಿದ ನಂತರವಷ್ಟೇ ಅದನ್ನು ಬಿಡುಗಡೆ ಮಾಡಿತ್ತು. ಇದು ರಾಷ್ಟ್ರೀಯ ಅಂಕಿಅಂಶ ಆಯೋಗದ ಹಂಗಾಮಿ ಅಧ್ಯಕ್ಷ ಪಿ.ಸಿ.ಮೋಹನನ್ ಸೇರಿದಂತೆ ಸದಸ್ಯರ ರಾಜೀನಾಮೆಗೆ ಕಾರಣವಾಗಿತ್ತು.
‘ಆಯೋಗವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ ಮತ್ತು ಅದು ಪರಿಣಾಮಕಾರಿಯಾಗಿಲ್ಲ ಎಂದು ನಾವು ಭಾವಿಸಿದ್ದೇವೆ. ಆಯೋಗದ ಕೆಲವು ನಿರ್ಧಾರಗಳನ್ನೂ ಪರಿಗಣಿಸಲಾಗಿಲ್ಲ. ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ನಾವು ಭಾವಿಸಿದ್ದೇವೆ. ಹೀಗಾಗಿ ನಾವು ರಾಷ್ಟ್ರಪತಿಗಳಿಗೆ ನಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದೇವೆ ’ಎಂದು ಮೋಹನನ್ ಆಗ ಹೇಳಿದ್ದರು.
ಮೋಹನನ್ ಮತ್ತು ಆಯೋಗದ ಇನ್ನೋರ್ವ ಸದಸ್ಯೆ ಜೆ.ವಿ.ಮೀನಾಕ್ಷಿ ಅವರು 2020,ಜೂನ್ವರೆಗೂ ಅಧಿಕಾರಾವಧಿಯನ್ನು ಹೊಂದಿದ್ದರು.
ಪ್ರತಿ ಹತ್ತು ವರ್ಷಗಳಿಗೆ ನಡೆಯುವ ಜನಗಣತಿಯನ್ನು 2021ರಲ್ಲಿ ಕೈಗೆತ್ತಿಕೊಳ್ಳಬೇಕಿತ್ತು,ಆದರೆ ಈ ಸರಕಾರವು ಈವರೆಗೂ ಅದರ ಗೋಜಿಗೆ ಹೋಗಿಲ್ಲ. ಜನಗಣತಿಯನ್ನು ಮುಂದೂಡಿರುವುದು 150 ವರ್ಷಗಳಲ್ಲಿ ಇದೇ ಪ್ರಥಮ ಬಾರಿಯಾಗಿದೆ.