×
Ad

ಜ್ಞಾನವಾಪಿ ಮಸೀದಿ ಸಮೀಕ್ಷೆ ವೇಳೆ ಸಿಕ್ಕ ಎಲ್ಲಾ ವಸ್ತುಗಳನ್ನು ಮ್ಯಾಜಿಸ್ಟ್ರೇಟ್‌ ಅವರಿಗೆ ಹಸ್ತಾಂತರಿಸಿ: ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವಾರಣಾಸಿ ಕೋರ್ಟ್‌ ಸೂಚನೆ

Update: 2023-09-15 18:24 IST

ಜ್ಞಾನವಾಪಿ ಮಸೀದಿ | Photo: PTI 

ವಾರಣಾಸಿ: ಜ್ಞಾನವಾಪಿ ಮಸೀದಿಯಲ್ಲಿ ನಡೆಸಲಾದ ವೈಜ್ಞಾನಿಕ ಸಮೀಕ್ಷೆ ವೇಳೆ ಕಂಡುಬಂದ ಹಿಂದೂ ಧರ್ಮ ಕುರಿತಾದ ಅಥವಾ ಐತಿಹಾಸಿಕ ಮಹತ್ವದ ಎಲ್ಲಾ ವಸ್ತುಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಹಸ್ತಾಂತರಿಸಬೇಕು ಎಂದು ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಲಯಕ್ಕೆ ಅಗತ್ಯ ಬಿದ್ದಾಗಲೆಲ್ಲಾ ಈ ವಸ್ತುಗಳನ್ನು ಹಾಜರುಪಡಿಸಲು ಅವುಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಥವಾ ಅವರು ನೇಮಕಗೊಳಿಸಿದವರು ಸಂರಕ್ಷಿಸಬೇಕು ಎಂದೂ ಸೂಚಿಸಲಾಗಿದೆ. ದೇವಸ್ಥಾನದ ಕಟ್ಟಡವನ್ನು ಧ್ವಂಸಗೈದು 17ನೇ ಶತಮಾನದ ಮಸೀದಿಯಾದ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿತ್ತೇ ಎಂಬುದನ್ನು ತಿಳಿಯಲು ಪುರಾತತ್ವ ಸರ್ವೇಕ್ಷಣಾ ಇಲಾಕೆ ಸಮೀಕ್ಷೆ ನಡೆಸುತ್ತಿದೆ.

ಸಮೀಕ್ಷೆಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ ಜುಲೈ 21ರಂದು ಆದೇಶಿಸಿತ್ತು. ಮಸೀದಿ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕು ಆಗ್ರಹಿಸಿ ಕೆಲ ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿತ್ತು. ಆದರೆ ಜುಲೈ 24ರಂದು ಸುಪ್ರೀಂ ಕೋರ್ಟ್‌ ಈ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ವಿಧಿಸಿತ್ತಲ್ಲದೆ ಸಮೀಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್‌ ಕದ ತಟ್ಟಲು ಮಸೀದಿ ಸಮಿತಿಗೆ ಅನುಮತಿಸಿತ್ತು. ಆಗಸ್ಟ್ 3ರಂದು ಅಲಹಾಬಾದ್‌ ಹೈಕೋರ್ಟ್‌ ಮಸೀದಿ ಸಮಿತಿಯ ಅರ್ಜಿಯನ್ನು ವಜಾಗೊಳಿಸಿತ್ತಲ್ಲದೆ, ಸಮೀಕ್ಷೆ ಕೈಗೊಳ್ಳಲು ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಅನುಮತಿಸಿತ್ತು.

ಈ ನಿರ್ಧಾರವನ್ನು ನಂತರ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು. ಮೂಲ ಅರ್ಜಿದಾರರಲ್ಲೊಬ್ಬರಾಗಿರುವ ರಾಖಿ ಸಿಂಗ್‌ ಎಂಬಾಕೆ ಸಲ್ಲಿಸಿದ್ದ ಅರ್ಜಿಯ ಆಧಾರದ ಮೇಲೆ ಈಗ ಹೊಸ ಆದೇಶ ಹೊರಬಿದ್ದಿದೆ. ಮಸೀದಿಯ ಉಸ್ತುವಾರಿ ನೋಡಿಕೊಳ್ಳುವ ಅಂಜುಮಾನ್ ಇಂತೆಝಮಿಯಾ ಮಸೀದಿ ಸಮಿತಿಯು ಮಸೀದಿಯ ಆವರಣದಲ್ಲಿ ಹಿಂದು ಧರ್ಮಕ್ಕೆ ಸಂಬಂಧಿಸಿದ ಐತಿಹಾಸಿಕ ಕುರುಹುಗಳನ್ನು ನಾಶಪಡಿಸುತ್ತಿದೆ ಎಂದು ಆಕೆ ಆರೋಪಿಸಿದ್ದರು.

ಹಿಂದೂ ಧರ್ಮದ ಚಿಹ್ನೆಗಳು ಇವೆ ಎಂದು ಅರ್ಜಿದಾರರು ಹೇಳುತ್ತಿರುವ ಮಸೀದಿಯ ಕೆಲ ಭಾಗಗಳನ್ನು ಸೀಲ್‌ ಮಾಡಬೇಕೆಂದೂ ಅರ್ಜಿದಾರೆ ತಮ್ಮ ಇನ್ನೊಂದು ಅಪೀಲಿನಲ್ಲಿ ಆಗ್ರಹಿಸಿದ್ದರಲ್ಲಿದೆ ಈ ಚಿಹ್ನೆಗಳಿಗೆ ಮಸೀದಿ ಸಮಿತಿ ಅಥವಾ ನಮಾಝ್ ಸಲ್ಲಿಸುವವರು ಹಾನಿಗೈಯ್ಯದಂತೆ ನೋಡಿಕೊಳ್ಳಬೇಕೆಂದು ಕೋರಿದ್ದರು.

ಅರ್ಜಿದಾರೆಯ ಆರೋಪಗಳು ಸುಳ್ಳು, ಮುಸ್ಲಿಮರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ತಡೆಯುವ ದುರುದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ಮಸೀದಿ ಸಮಿತಿ ವಾದಿಸಿತ್ತಲ್ಲದೆ ಸಮೀಕ್ಷೆ ವೇಳೆ ಕಂಡುಬಂದ ಎಲ್ಲಾ ವಸ್ತುಗಳು ಸುರಕ್ಷಿತವಾಗಿವೆ ಎಂದೂ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News