ಹರ್ಯಾಣ|ಕಸದ ರಾಶಿಯಲ್ಲಿ ದೊರೆತ 15 ಲಕ್ಷ ರೂ. ಮೌಲ್ಯದ ಚಿನ್ನ ವಾರೀಸುದಾರರಿಗೆ ಪ್ರಾಮಾಣಿಕತೆಯಿಂದ ಮರಳಿಸಿದ ಗುಜರಿ ವ್ಯಾಪಾರಿ ಅಖ್ತರ್ ಖಾನ್
Photo Credit : @TheRFTeam \ X
ಫರೀದಾಬಾದ್,ಫೆ.20: ಸ್ಥಳೀಯ ನಿವಾಸಿಯೋರ್ವ ಕಸದ ರಾಶಿಯಲ್ಲಿ ಬಚ್ಚಿಟ್ಟಿದ್ದ 15 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಹಿಂದಿರುಗಿಸುವ ಮೂಲಕ ಗುಜರಿ ವ್ಯಾಪಾರಿ ಪ್ರಾಮಾಣಿಕತೆಯನ್ನು ಮೆರೆದಿದ್ದಾನೆ.
ಜನವರಿ 2024ರಲ್ಲಿ ಅಶೋಕ ಶರ್ಮಾ ತನ್ನ ಕುಟುಂಬದೊಂದಿಗೆ ಪ್ರಯಾಗರಾಜ್‌ನಲ್ಲಿ ನಡೆಯುತ್ತಿದ್ದ ಕುಂಭಮೇಳಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಾಗ ಕಳ್ಳರು ನುಗ್ಗಬಹುದು ಎಂದು ಆತಂಕಗೊಂಡಿದ್ದ ಅವರು ಕುಟುಂಬದ 100 ಗ್ರಾಂ ತೂಕದ ಚಿನ್ನಾಭರಣಗಳನ್ನು ರಕ್ಷಿಸಲು ವಿನೂತನ ಉಪಾಯವನ್ನು ಕಂಡುಕೊಂಡಿದ್ದರು. ಚಿನ್ನಾಭರಣಗಳನ್ನು ಹಳೆಯ ಪೆಟ್ಟಿಗೆಯೊಂದರಲ್ಲಿ ತುಂಬಿ, ಮನೆಯಲ್ಲಿನ ಗುಜರಿ ವಸ್ತುಗಳು ತುಂಬಿದ್ದ ಚೀಲದಲ್ಲಿ ಬಚ್ಚಿಟ್ಟಿದ್ದರು.
ಕುಟುಂಬವು ಯಾತ್ರೆಯಿದ ವಾಪಸಾದ ಬಳಿಕ ಬದುಕು ಎಂದಿನಂತೆ ಸಾಗಿತ್ತು. ಶರ್ಮಾಗೆ ಚಿನ್ನಾಭರಣಗಳ ನೆನಪೇ ಇರಲಿಲ್ಲ.
ಸುಮಾರು 10 ತಿಂಗಳುಗಳ ಬಳಿಕ ದೀಪಾವಳಿಗೆ ಮುನ್ನ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಶರ್ಮಾ ಕುಟುಂಬವು ತಿಳಿಯದೆ ಚಿನ್ನಾಭರಣಗಳಿದ್ದ ಹಳೆಯ ವಸ್ತುಗಳ ಚೀಲವನ್ನು ಗುಜರಿ ವ್ಯಾಪಾರಿ ಹಾಜಿ ಅಖ್ತರ್ ಖಾನ್‌ಗೆ ಮಾರಾಟ ಮಾಡಿತ್ತು. ದೀಪಾವಳಿ ಸಂದರ್ಭದಲ್ಲಿ ಪೂಜೆಗೆ ನಗದು ಹಣ ಮತ್ತು ಚಿನ್ನಾಭರಣಗಳನ್ನು ಇರಿಸಲು ಮುಂದಾದಾಗ ಕುಟುಂಬಕ್ಕೆ ತನ್ನ ತಪ್ಪಿನ ಅರಿವಾಗಿತ್ತು.
ತಕ್ಷಣವೇ ಖಾನ್ ಗೋದಾಮಿಗೆ ಧಾವಿಸಿದ ಶರ್ಮಾ ಅಲ್ಲೆಲ್ಲ ಚಿನ್ನಾಭರಣಗಳಿಗಾಗಿ ವಿಫಲ ಹುಡುಕಾಟ ನಡೆಸಿದ್ದರು. ಕುಟುಂಬವು ಹತಾಶಗೊಂಡಿತ್ತು. ಚಿನ್ನಾಭರಣಗಳನ್ನು ಕಳ್ಳರಿಂದ ರಕ್ಷಿಸುವ ಪ್ರಯತ್ನದಲ್ಲಿ ಶರ್ಮಾ ಗೊತ್ತಿಲ್ಲದೇ ಅದನ್ನು ಗುಜರಿ ವ್ಯಾಪಾರಿಗೆ ನೀಡಿದ್ದರು.
ತಿಂಗಳುಗಳ ಬಳಿಕ ತನ್ನ ಅಂಗಡಿಯಲ್ಲಿನ ಗುಜರಿ ವಸ್ತುಗಳನ್ನು ಪರಿಶೀಲಿಸುತ್ತಿದ್ದ ಖಾನ್ ಕಣ್ಣಿಗೆ ಆ ರಾಶಿಯಲ್ಲಿ ಹಳೆಯ ಪೆಟ್ಟಿಗೆಯು ಕಣ್ಣಿಗೆ ಬಿದ್ದಿತ್ತು. ತೆರೆದು ನೋಡಿದಾಗ ಅದರಲ್ಲಿ ಚಿನ್ನಾಭರಣಗಳನ್ನು ಕಂಡು ದಂಗಾಗಿದ್ದರು. ತಕ್ಷಣವೇ ಅವರಿಗೆ ಶರ್ಮಾರ ನೆನಪಾಗಿತ್ತು.
ಪರರ ಸೊತ್ತುಗಳಿಗೆ ಆಸೆ ಪಡದ ಖಾನ್ ಹೆಚ್ಚುವರಿ ಪೋಲಿಸ್ ಆಯುಕ್ತ ಜಿತೇಶ್ ಮಲ್ಹೋತ್ರಾರ ಸಮ್ಮುಖದಲ್ಲಿ 15 ಲ.ರೂ.ಗಳ ಚಿನ್ನಾಭರಣಗಳನ್ನು ಶರ್ಮಾರಿಗೆ ಮರಳಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.