ಪಾಕಿಸ್ತಾನದ ಪರ ಬೇಹುಗಾರಿಕೆ: ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೇರಿದಂತೆ 6 ಮಂದಿಯ ಬಂಧನ
Photo credit: indiatoday.in
ಹೊಸದಿಲ್ಲಿ: ಹರಿಯಾಣ ಮೂಲದ ಟ್ರಾವೆಲ್ ಬ್ಲಾಗರ್ ಸೇರಿದಂತೆ ಆರು ಭಾರತೀಯ ಪ್ರಜೆಗಳನ್ನು ಪಾಕಿಸ್ತಾನಿ ಕಾರ್ಯಕರ್ತರಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಹರಿಯಾಣ ಮತ್ತು ಪಂಜಾಬ್‌ನಾದ್ಯಂತ ಈ ಜಾಲ ವ್ಯಾಪಿಸಿದ್ದು, ಪ್ರಮುಖ ಕಾರ್ಯಕರ್ತರು ಏಜೆಂಟ್‌ಗಳು, ಹಣಕಾಸು ಮಾರ್ಗದರ್ಶಕರು ಮತ್ತು ಮಾಹಿತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ.
ಆರೋಪಿಗಳಲ್ಲಿ "ಟ್ರಾವೆಲ್ ವಿತ್ ಜೋ" ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದ ಜ್ಯೋತಿ ಮಲ್ಹೋತ್ರಾ ಕೂಡ ಸೇರಿದ್ದಾರೆ. ಕಮಿಷನ್ ಏಜೆಂಟ್‌ಗಳ ಮೂಲಕ ವೀಸಾ ಪಡೆದ ನಂತರ ಅವರು 2023 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಅವರ ಪ್ರವಾಸದ ಸಮಯದಲ್ಲಿ, ಅವರು ಹೊಸದಿಲ್ಲಿಯ ಪಾಕಿಸ್ತಾನ ಹೈಕಮಿಷನ್‌ನ ಸಿಬ್ಬಂದಿ ಸದಸ್ಯ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ದಾನಿಶ್ ಎಂಬಾತನೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡರು ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾನಿಶ್ ಜ್ಯೋತಿಯನ್ನು ಹಲವಾರು ಪಾಕಿಸ್ತಾನಿ ಗುಪ್ತಚರ ಕಾರ್ಯಾಚರಣೆಗಳಿಗೆ ಪರಿಚಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಜ್ಯೋತಿ ವಾಟ್ಸಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಎನ್‌ಕ್ರಿಪ್ಟ್ ಮಾಡಲಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಶಕೀರ್ ಅಲಿಯಾಸ್ ರಾಣಾ ಶಹಬಾಜ್ ಸೇರಿದಂತೆ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದಳು, ಅವರ ಮೊಬೈಲ್ ಸಂಖ್ಯೆಯನ್ನು "ಜಾಟ್ ರಾಂಧವ" ಎಂದು ಸೇವ್ ಮಾಡಿಕೊಂಡಿದ್ದಳು ಎನ್ನಲಾಗಿದೆ.
ಅವರು ಭಾರತೀಯ ಸ್ಥಳಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನದ ಸಕಾರಾತ್ಮಕ ಚಿತ್ರಣವನ್ನು ಬಿಂಬಿಸಲು ಸಕ್ರಿಯವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಪಾಕ್ ಏಜೆಂಟ್ ಜೊತೆ ನಿಕಟ ಸಂಬಂಧವನ್ನು ಹೊಂದಿದ್ದ ಆರೋಪಿ ಜ್ಯೋತಿ, ಅವರೊಂದಿಗೆ ಇಂಡೋನೇಷ್ಯಾದ ಬಾಲಿಗೆ ಪ್ರಯಾಣ ಬೆಳೆಸಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಮತ್ತೋರ್ವ ಪ್ರಮುಖ ಆರೋಪಿ ಪಂಜಾಬ್‌ನ ಮಲೇರ್‌ಕೋಟ್ಲಾದ ಗುಜಲಾ ವೀಸಾಕ್ಕೆ ಅರ್ಜಿ ಸಲ್ಲಿಸಲು ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ಗೆ ಭೇಟಿ ನೀಡಿದ್ದಳು. ಆಕೆ ಅಲ್ಲಿ ದಾನಿಶ್ ಎಂಬಾತನನ್ನು ಭೇಟಿಯಾಗಿ ಆತನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಳು. ದಾನಿಶ್ ಮದುವೆಯ ಭರವಸೆ ನೀಡಿ ಗುಜಲಾಗೆ ಹಣವನ್ನು ಕಳುಹಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.